×
Ad

ತಂದೆಯ ವಿವರ ಕೇಳುವುದರಿಂದ ತಾಯಿಯ ಘನತೆಗೆ ಧಕ್ಕೆ: ಕೃತಕ ಗರ್ಭಧಾರಣೆಯ ಬಗ್ಗೆ ಕೇರಳ ಹೈಕೋರ್ಟ್

Update: 2021-08-16 23:06 IST

ಕೊಚ್ಚಿ, ಆ. 16: ಅವಿವಾಹಿತೆ ಅಥವಾ ಒಂಟಿ ಮಹಿಳೆಯರು ಐವಿಎಫ್ನಂತಹ ಕೃತಕ ಗರ್ಭಧಾರಣೆ ಮೂಲಕ ಪಡೆಯುವ ಮಕ್ಕಳ ತಂದೆಯ ವಿವರವನ್ನು ಜನನ ಹಾಗೂ ಮರಣ ನೋಂದಣಿಯಲ್ಲಿ ದಾಖಲಿಸುವಂತೆ ಕೋರುವುದು ತಾಯಿ ಹಾಗೂ ಮಗುವಿನ ಘನತೆಯ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಕೇರಳ ಉಚ್ಚ ನ್ಯಾಯಾಲಯ ಪ್ರತಿಪಾದಿಸಿದೆ. 

ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮಕ್ಕಳ ಜನನ ಹಾಗೂ ಮರಣ ನೋಂದಣಿ ಮಾಡಲು ಸೂಕ್ತ ನಮೂನೆಯ ಅರ್ಜಿಗಳನ್ನು ರಾಜ್ಯ ಸರಕಾರ ಒದಗಿಸಬೇಕು ಎಂದು ಉಚ್ಚ ನ್ಯಾಯಾಲಯ ಸೂಚಿಸಿದೆ. ಕೇರಳದ ಜನನ ಹಾಗೂ ಮರಣ ನೋಂದಣಿ ನಿಯಮ 1970ರ ಅರ್ಜಿಯಲ್ಲಿ ತಂದೆಯ ವಿವರ ಉಲ್ಲೇಖಿಸುವ ಅಗತ್ಯತೆ ಪ್ರಶ್ನಿಸಿ ಐವಿಎಫ್ ಮೂಲಕ ಗರ್ಭಿಣಿಯಾದ ವಿಚ್ಛೇದಿತ ಮಹಿಳೆಯೋರ್ವರು ಸಲ್ಲಿಸಿದ ಮನವಿಗೆ ಸಂಬಂಧಿಸಿ ಉಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. 

ಮಹಿಳೆ ತನ್ನ ಅರ್ಜಿಯಲ್ಲಿ ಮಗುವಿನ ತಂದೆಯ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ವೀರ್ಯ ದಾನಿಯ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಬಹಿರಂಗಪಡಿಸಿದರೆ ತನ್ನ ಖಾಸಗಿತನ, ಸ್ವಾತಂತ್ರ ಹಾಗೂ ಘನತೆಯ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದರು. ತಂದೆಯ ವಿವರ ನೀಡುವ ಕಾಲಂ ಅನ್ನು ಖಾಲಿಯಾಗಿ ಬಿಟ್ಟು ಪ್ರಮಾಣ ಪತ್ರ ನೀಡುವುದು ಕೂಡ ತನ್ನ ಘನತೆ, ಖಾಸಗಿತನ ಹಾಗೂ ಸ್ವಾತಂತ್ರದ ಮೇಲಿನ ಹಸ್ತಕ್ಷೇಪ ಎಂದು ಮಹಿಳೆ ಹೇಳಿದ್ದಾರೆ. 

ಮಹಿಳೆಯ ಪ್ರತಿಪಾದನೆಗೆ ಒಪ್ಪಿಗೆ ಸೂಚಿಸಿರುವ ಉಚ್ಚ ನ್ಯಾಯಾಲಯ ಐವಿಎಫ್ ನಂತಹ ಕೃತಕ ಗರ್ಭಧಾರಣೆಗೆ ಒಳಗಾಗುವ ಅವಿವಾಹಿತ ಅಥವಾ ಒಂಟಿ ಮಹಿಳೆಯ ಹಕ್ಕನ್ನು ಗುರುತಿಸಬೇಕು ಹಾಗೂ ದೇಶ ಅದನ್ನು ಒಪ್ಪಿಕೊಳ್ಳಬೇಕು. ಇಂತಹ ಪ್ರಕ್ರಿಯೆಯಲ್ಲಿ ವೀರ್ಯದಾನಿಯ ಹೆಸರನ್ನು ಕಾನೂನಿನ ಅಡಿಯಲ್ಲಿ ಬಹಿರಂಗಪಡಿಸಲು ಒತ್ತಾಯಪಡಿಸಬಹುದಾದ ಸಂದರ್ಭ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News