ದಲಿತ ಬಾಲಕಿಯ ಅತ್ಯಾಚಾರ : ವರದಿ ಕೋರಿದ ದಿಲ್ಲಿ ಉಚ್ಚ ನ್ಯಾಯಾಲಯ

Update: 2021-08-17 17:31 GMT

ಹೊಸದಿಲ್ಲಿ, ಆ. 17: ಹೊಸದಿಲ್ಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ಸೂಚಿಸಿದೆ. ಪ್ರಕರಣದ ತನಿಖೆಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರೂಪಿಸುವಂತೆ ಕೋರಿ ಬಾಲಕಿಯ ಹೆತ್ತವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯೋಗೇಶ್ ಖನ್ನಾ, ನವೆಂಬರ್ 8ರಂದು ನಡೆಯುವ ವಿಚಾರಣೆಗೆ ಮುನ್ನ ಸ್ಥಿತಿಗತಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. 

ತನಿಖೆಯ ಹಂತದ ಬಗ್ಗೆ ತಿಳಿಯಲು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ರಾಜ್ಯ ಸರಕಾರದ ಪರವಾಗಿ ಹಾಜರಾಗಿದ್ದ ವಕೀಲ ಸಂಜಯ್ ಲಾವೋ, ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಕ್ರೈಮ್ ಬ್ರಾಂಚ್ ಗೆ ವರ್ಗಾಯಿಸಿದ ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ರೂಪಿಸಲಾಗಿದೆ ಎಂದಿತು. 

‘‘ಡಿಸಿಪಿ, ಕ್ರೈಮ್ ಬ್ರಾಂಚ್ ಸಿಟ್ ಅನ್ನು ರೂಪಿಸಿದೆ. ಇದಕ್ಕೆ ಇಬ್ಬರು ಎಸಿಪಿಗಳಿದ್ದಾರೆ. ಮನವಿ ಈಡೇರಿಸಲಾಗಿದೆ’’ ಎಂದು ಹೇಳಿದ ಲಾವೊ, ತನಿಖೆಯನ್ನು ದಿಲ್ಲಿ ಪೊಲೀಸ್‌ ನ ಉನ್ನತ ಶ್ರೇಣಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. 

ಬಾಲಕಿಯ ಕುಟುಂಬಕ್ಕೆ 24 ಗಂಟೆಗಳ ಕಾಲ ಭದ್ರತೆ ನೀಡಲಾಗಿದೆ ಎಂದು ಲಾವೋ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News