ಪಶ್ಚಿಮಬಂಗಾಳ: ‘ಯುವ ಸಂಕಲ್ಪ ರ‍್ಯಾಲಿ’ಗೆ ಮುನ್ನ 30 ಬಿಜೆಪಿ ಕಾರ್ಯಕರ್ತರ ಬಂಧನ
Update: 2021-08-17 22:18 IST
ಸಿಲಿಗುರಿ(ಪಶ್ಚಿಮಬಂಗಾಳ), ಆ. 17: ಬಿಜೆಪಿಯ ‘‘ಯುವ ಸಂಕಲ್ಪ ಯಾತ್ರೆ’’ಗೆ ಮುನ್ನ ಪಕ್ಷದ ಕೇಂದ್ರ ಕಚೇರಿಯ ಎದುರಿನಿಂದ ಸಿಲಿಗುರಿ ಶಾಸಕ ಶಂಕರ್ ಘೋಷ್ ಸೇರಿದಂತೆ ಬಿಜೆಪಿಯ ಕನಿಷ್ಠ 30 ಮಂದಿಯನ್ನು ಪಶ್ಚಿಮಬಂಗಾಳದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ‘‘ಯುವ ಸಂಕಲ್ಪ ಯಾತ್ರೆ’’ಗೆ ಅನುಮತಿ ಪಡೆದುಕೊಂಡಿಲ್ಲ. ಆದುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಸಿಲಿಗುರಿ ಮೆಟ್ರೊಪಾಲಿಟನ್ ಪೊಲೀಸ್ ನ ಡಿಸಿಪಿ ಜಾಯ್ ತುಡು ಹೇಳಿದ್ದಾರೆ.
ಈ ಬಂಧನದ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಪ್ರಕರಣದಲ್ಲಿ ಪೊಲೀಸರು ಕೇಂದ್ರದ ಸಹಾಯಕ ಸಚಿವ ಹಾಗೂ ಆಲಿಪುರ್ದೌರ್ ನ ಬಿಜೆಪಿ ಸಂಸದ ಜಾನ್ ಬರ್ಲಾ ಅವರನ್ನು ಸ್ವಾಗತಿಸಲು ಬಾಗ್ದೊಗ್ರಾ ವಿಮಾನ ನಿಲ್ದಾಣದಲ್ಲಿ ಸೇರಿದ್ದ ನಾರ್ಯಾನಿ ಸೇನೆಯ 35 ಕಾರ್ಯಕರ್ತರನ್ನು ಬಂಧಿಸಿದ್ದಾರೆ.