ಸೋನಿಯಾರಿಂದ ಮಹಿಳಾ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆಯಾಗಿ ನೆಟ್ಟಾ ಡಿ’ಸೋಜಾ ನೇಮಕ
ಹೊಸದಿಲ್ಲಿ,ಆ.17: ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪಕ್ಷದ ಮಹಿಳಾ ಘಟಕದ ಹಂಗಾಮಿ ಅಧ್ಯಕ್ಷೆಯಾಗಿ ನೆಟ್ಟಾ ಡಿ’ಸೋಜಾ ಅವರನ್ನು ಮಂಗಳವಾರ ನೇಮಕಗೊಳಿಸಿದ್ದಾರೆ. ಸೋಮವಾರ ಈ ಹುದ್ದೆಗೆ ರಾಜೀನಾಮೆ ನೀಡಿದ್ದ ಸುಷ್ಮಿತಾ ದೇವ್ ಅವರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಪೂರ್ಣಕಾಲಿಕ ಅಧ್ಯಕ್ಷರ ನೇಮಕಾತಿಯವರೆಗೆ ಡಿ’ಸೋಜಾ ಅವರನ್ನು ಮಹಿಳಾ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದ್ದು, ಇದು ತಕ್ಷಣದಿಂದಲೇ ಜಾರಿಗೊಳ್ಳುತ್ತದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜೀನಾಮೆಗೆ ಎರಡು ದಿನಗಳ ಮುನ್ನ ದೇವ್ ಅಸ್ಸಾಂ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳ ತಂಡದೊಂದಿಗೆ ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಮಾಜಿ ಕೇಂದ್ರ ಸಚಿವ ದಿ.ಸಂತೋಷ ಮೋಹನ ದೇವ್ ಅವರ ಪುತ್ರಿಯಾಗಿರುವ ಅವರು 2014ರಲ್ಲಿ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ನಿಂದ ದೇವ್ ನಿರ್ಗಮನ ಅಸ್ಸಾಮಿನಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ ಎಂದು ಪರಿಗಣಿಸಲಾಗಿದೆ.