ಔಟ್‍ಲುಕ್ ಪ್ರಧಾನ ಸಂಪಾದಕ ರುಬೇನ್ ಬ್ಯಾನರ್ಜಿ ಅವರನ್ನು ಹೊರದಬ್ಬಲಾಗುತ್ತಿದೆಯೇ?

Update: 2021-08-18 08:54 GMT
ರುಬೇನ್ ಬ್ಯಾನರ್ಜಿ (Photo: outlookindia.com)

ಹೊಸದಿಲ್ಲಿ: ಔಟ್‍ಲುಕ್ ಮ್ಯಾಗಜೀನ್ ತನ್ನ ಮೇ 13ರ ಸಂಚಿಕೆಯಲ್ಲಿ "ಗವರ್ನ್‍ಮೆಂಟ್ ಆಫ್ ಇಂಡಿಯಾ ಮಿಸ್ಸಿಂಗ್'' ಎಂಬ ಶೀರ್ಷಿಕೆಯ ಮುಖಪುಟ ಲೇಖನ ಪ್ರಕಟಿಸಿತ್ತು. ಕೋವಿಡ್ ಎರಡನೇ ಅಲೆ ದೇಶದಲ್ಲಿ ತಾಂಡವವಾಡುತ್ತಿರುವಂತಹ ಸಂದರ್ಭದಲ್ಲಿ ಸರಕಾರವನ್ನು ಟೀಕಿಸಿ ಬರೆಯಲಾದ ಈ ಮುಖಪುಟ ವರದಿಯಲ್ಲಿ ಶಶಿ ತರೂರ್, ಮಹುವಾ ಮೊಯಿತ್ರಾ, ಪಿ ಬಿ ಮೆಹ್ತಾ ಮುಂತಾದವರ ಲೇಖನಗಳೂ ಇದ್ದವು. ಆದರೆ ಸರಕಾರವನ್ನು ಟೀಕಿಸಿರುವ ಈ ವರದಿ ಅಧಿಕಾರಸ್ಥರಿಗೆ ಹಿಡಿಸದೇ ಇರುವ ಕಾರಣದಿಂದಾಗಿ ಔಟ್‍ಲುಕ್ ಪ್ರಧಾನ ಸಂಪಾದಕ ರುಬೇನ್ ಬ್ಯಾನರ್ಜಿ ಅವರನ್ನು ಹೊರದಬ್ಬಲಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಮಾಧ್ಯಮ ವಲಯದಲ್ಲಿ ಬಹಳಷ್ಟು ಚರ್ಚೆಗೀಡಾಗಿದೆ ಎಂದು www.newslaundry.com ವರದಿ ಮಾಡಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಆಗಸ್ಟ್ 11ರಂದು ರುಬೇನ್ ಬ್ಯಾನರ್ಜಿ ಅವರು ತಮ್ಮ ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿ "ನಾನು ನಾಳೆಯಿಂದ ಒಂದು ತಿಂಗಳು ರಜೆಯಲ್ಲಿರುತ್ತೇನೆ. ನಾನು ದಿಲ್ಲಿಯಲ್ಲಿಯೇ ಇರುತ್ತೇನೆ, ಆದರೆ ಈ ಅವಧಿಯಲ್ಲಿ, ಪ್ರಮುಖವಾಗಿ ಮೊದಲ ಕೆಲ ದಿನಗಳ ಕಾಲ ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲು ಬಯಸುವುದಿಲ್ಲ,'' ಎಂದು ಬರೆದಿದ್ದಾರೆ.

ಬ್ಯಾನರ್ಜಿ ಅವರು ಔಟ್‍ಲುಕ್‍ನಿಂದ ನಿರ್ಗಮಿಸಲಿದ್ದಾರೆಂಬುದರ ಸಂಕೇತವೇ ಈ ಇಮೇಲ್ ಆಗಿದೆ ಎಂದು ಹಲವರು ನಂಬಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅವರು ಸಂಸ್ಥೆಯ ಆಡಳಿತದಿಂದ ಸಾಕಷ್ಟು ಒತ್ತಡ ಎದುರಿಸುತ್ತಿದ್ದರೆಂದು ಮೂಲಗಳು ತಿಳಿಸಿವೆ ಎಂದು  www.newslaundry.com ವರದಿ ಮಾಡಿದೆ.

ಅಚ್ಚರಿಯೆಂದರೆ ಬಹಳಷ್ಟು ಚರ್ಚೆಗೀಡಾಗಿರುವ ಔಟ್‍ಲುಕ್‍ನ ಮೇ 13ರ ಮುಖಪುಟ ವರದಿಯ ಜತೆಗಿದ್ದ ಮುಖಪುಟ ಚಿತ್ರವು ಮ್ಯಾಗಝಿನ್‍ನ ಆನ್‍ಲೈನ್ ಆವೃತ್ತಿಯಿಂದ ಸ್ವಲ್ಪ ಸಮಯ ನಾಪತ್ತೆಯಾಗಿದ್ದರೂ ನಂತರ ಅದು ಕೂಡ ಸಾಕಷ್ಟು ಸುದ್ದಿಗೆ ಗ್ರಾಸವಾದ ನಂತರ ಅದನ್ನು ಮರುಸ್ಥಾಪಿಸಲಾಗಿತ್ತು.

ಆದರೆ ಈ ನಿರ್ದಿಷ್ಟ ಮುಖಪುಟ ವರದಿ ಅಧಿಕಾರಸ್ಥರಿಂದ ಸಾಕಷ್ಟು ವಿರೋಧ ಗಿಟ್ಟಿಸಿತ್ತೆನ್ನಲಾಗಿದ್ದು ಇಂತಹ ಒಂದು ವರದಿಯನ್ನು ಮಾಡಬಾರದಾಗಿತ್ತು ಎಂದು ಸಂಪಾದಕೀಯ ಬಳಗಕ್ಕೆ ಸೂಚ್ಯವಾಗಿ ಆಡಳಿತ ತಿಳಿಸಿತ್ತೆನ್ನಲಾಗಿದೆ.

ಇದರ ಬೆನ್ನಲ್ಲೇ 'ಪೆಗಾಸಸ್' ವಿಚಾರ ಮುಖಪುಟ ಲೇಖನವಾಗುವ ಹಾಗಿಲ್ಲ ಎಂದು ಸಂಪಾದಕೀಯ ಬಳಗಕ್ಕೆ ಆಡಳಿತ ಮಂಡಳಿ ಸೂಚಿಸಿದೆಯೆನ್ನಲಾಗಿದೆ.

ಇತ್ತೀಚೆಗೆ 'ಔಟ್‍ಲುಕ್ ಬಿಸಿನೆಸ್' ಹಾಗೂ 'ಔಟ್‍ಲುಕ್ ಮನಿ'ಯಲ್ಲಿನ ಉದ್ಯೋಗಿಗಳ ವಜಾ ಬ್ಯಾನರ್ಜಿ ಮತ್ತು ಆಡಳಿತ ನಡುವೆ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತೆನ್ನಲಾಗಿದೆ.

ಆದರೆ ರುಬೇನ್ ಬ್ಯಾನರ್ಜಿ ಅವರು ಔಟ್‍ಲುಕ್ ತೊರೆಯುತ್ತಾರೆಂಬ ಊಹಾಪೋಹಗಳನ್ನು ಸಂಸ್ಥೆಯ ಸಿಇಒ ಇಂದ್ರನೀಲ್ ರಾಯ್ ಅಲ್ಲಗಳೆದಿದ್ದಾರೆ. "ಹಾಗೇನಿಲ್ಲ. ನಾನೇ ಅವರ ರಜೆ ಮಂಜೂರುಗೊಳಿಸಿದ್ದೆ. ಸಂಸ್ಥೆಯಲ್ಲಿ ಬಹಳಷ್ಟು ಕೆಲಸಗಳು ಡಿಜಿಟಲ್ ಪಾಲಿಸಿ ಅನ್ವಯ ನಡೆಯುತ್ತಿವೆ. ಈ ಸಂದರ್ಭ ಒಂದು ರಜೆ ತೆಗೆದುಕೊಳ್ಳುವುದಾಗಿ ರುಬೇನ್ ಹೇಳಿದರು,'' ಎಂದು ಅವರು ಹೇಳಿದರಲ್ಲದೆ "ಮಿಸ್ಸಿಂಗ್'' ಮುಖಪುಟ ಲೇಖನದ ನಂತರ ಆಡಳಿತ ಮಂಡಳಿ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News