ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್-370 ರದ್ದತಿಯ ಬಳಿಕ 23 ಬಿಜೆಪಿ ನಾಯಕರು, ಕಾರ್ಯಕರ್ತರ ಹತ್ಯೆ

Update: 2021-08-20 14:33 GMT

ಶ್ರೀನಗರ,ಆ.20: ಕೇಂದ್ರ ಸರಕಾರವು 2019,ಆಗಸ್ಟ್ ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ 23 ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ 12 ಮತ್ತು ಜಮ್ಮುವಿನಲ್ಲಿ 11 ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ. ಕಳೆದೊಂದು ವರ್ಷದಲ್ಲಿ ಕುಲ್ಗಾಮ್ ಜಿಲ್ಲೆಯೊಂದರಲ್ಲಿಯೇ ಒಂಬತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲಾಗಿದೆ ಎಂದು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ತಿಳಿಸಿದರು. 

ಉಗ್ರರ ನಿರಂತರ ದಾಳಿಗಳ ನಡುವೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸುವಂತೆ ಠಾಕೂರ್ ಪೊಲೀಸರನ್ನು ಕೋರಿದ್ದಾರೆ.
  
ತನ್ನ ನಾಯಕರು ಮತ್ತು ಕಾರ್ಯಕರ್ತರು ಬೆದರಿಕೆಗಳನ್ನು ಎದುರಿಸುತ್ತಿರುವ ಮತ್ತು ಅವರ ವಿರುದ್ಧ ನಿರಂತರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರಿಗಾಗಿ ಕಾಶ್ಮೀರ ಕಣಿವೆಯ ಎಲ್ಲ ಹತ್ತೂ ಜಿಲ್ಲೆಗಳಲ್ಲಿ ಸುರಕ್ಷಿತ ಗುಂಪು ವಸತಿಯನ್ನು ಕಲ್ಪಿಸುವ ತುರ್ತು ಅಗತ್ಯವಿದೆ ಎಂದೂ ಬಿಜೆಪಿಯು ಹೇಳಿದೆ. ನೂರಾರು ಬಿಜೆಪಿ ಕಾರ್ಯಕರ್ತರಿಗೆ ಸುರಕ್ಷಿತ ಸ್ಥಳಗಳಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಹಲವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಉಗ್ರರು ಮುಖ್ಯವಾಗಿ ಕಣಿವೆಯ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಆಡಳಿತವನ್ನು ವಹಿಸಿಕೊಂಡ ಬೆನ್ನಲ್ಲೇ ಉಪ ರಾಜ್ಯಪಾಲ ಮನೋಜ್ ಸಿನ್ಹಾ ಅವರು ಬಿಜೆಪಿಯ ತಳಮಟ್ಟದ ಜನಪ್ರತಿನಿಧಿಗಳಿಗೆ ಮತ್ತು ಕಾರ್ಯಕರ್ತರಿಗೆ ಉತ್ತಮ ಭದ್ರತೆಯನ್ನು ಒದಗಿಸುವ ಭರವಸೆ ನೀಡಿದ್ದರು. ಆದರೆ ತಳಮಟ್ಟದ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಉಗ್ರಗಾಮಿ ಮುಕ್ತ ಕಾಶ್ಮೀರವನ್ನು ಖಚಿತಪಡಿಸುವ ಬಿಜೆಪಿಯ ಭರವಸೆ ಏನಾಯಿತು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷದ ಜುಲೈನಲ್ಲಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಸೀಂ ಬಾರಿ, ಅವರ ತಂದೆ ಬಶೀರ್ ಅಹ್ಮದ್ ಸುಲ್ತಾನ್ ಮತ್ತು ಸೋದರ ಉಮರ್ ಸುಲ್ತಾನ್ ಅವರನ್ನು ಉಗ್ರರು ಅವರ ನಿವಾಸದ ಹೊರಗೆ ಗುಂಡಿಟ್ಟು ಹತ್ಯೆಗೈದ ಬಳಿಕ ಬಿಜೆಪಿಯು ತನ್ನ ಹಲವಾರು ಕಾರ್ಯಕರ್ತರು ಮತ್ತು ಪಂಚಾಯತ್ ಸದಸ್ಯರನ್ನು ಕಣಿವೆಯ ವಿವಿಧ ಜಿಲ್ಲೆಗಳಲ್ಲಿಯ ‘ಸುರಕ್ಷಿತ ಮನೆ ’ಗಳಿಗೆ ಸ್ಥಳಾಂತರಿಸಿತ್ತು. ಹಲವಾರು ಕಾರ್ಯಕರ್ತರಿಗೆ ಶ್ರೀನಗರ, ಪಹಲ್ಗಾಮ್ ಮತ್ತು ಗುಲ್ಮಾರ್ಗ್ ನಲ್ಲಿಯ ಹೋಟೆಲ್ ಗಳಲ್ಲಿ ವಸತಿಗಳನ್ನು ಕಲ್ಪಿಸಲಾಗಿತ್ತು.

ಆದರೆ ತಮ್ಮ ಕುಟುಂಬಗಳಿಂದ ಹಲವಾರು ವಾರಗಳ ಕಾಲ ದೂರವಿರುತ್ತಿದ್ದ ಬಿಜೆಪಿ ಕಾರ್ಯಕರ್ತರು ಆಗಾಗ್ಗೆ ತಮ್ಮ ಮನೆಗಳಿಗೆ ಹಿಂದಿರುಗುವುದು ಅನಿವಾರ್ಯವಾಗಿದ್ದರಿಂದ ಮತ್ತು ಉಗ್ರರು ದಾಳಿಗಾಗಿ ಇಂತಹ ಸಂದರ್ಭಗಳಿಗಾಗಿ ಹೊಂಚು ಹಾಕುತ್ತಿದ್ದರಿಂದ ಪಕ್ಷದ ಈ ಯೋಜನೆಯು ಅಷ್ಟೇನೂ ಯಶಸ್ವಿಯಾಗಲಿಲ್ಲ. ನಿರಂತರ ಹತ್ಯೆಗಳು ಪಕ್ಷದ ಕಾರ್ಯಕರ್ತರಲ್ಲಿ ವ್ಯಾಪಕ ಭೀತಿಯನ್ನು ಸೃಷ್ಟಿಸಿದ್ದು, ಹಲವರು ಪಕ್ಷಕ್ಕೆ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಬಿಜೆಪಿ ನಾಯಕನೋರ್ವನ ಅಪ್ರಾಪ್ತ ವಯಸ್ಕ ಪುತ್ರ ಸೇರಿದಂತೆ ನಾಲ್ವರನ್ನು ಉಗ್ರರು ಹತ್ಯೆಗೈದಿದ್ದಾರೆ. ಇತ್ತೀಚಿನ ದಾಳಿ ಆ.17ರಂದು ನಡೆದಿದ್ದು,ಕುಲ್ಗಾಮ್ ನ ಬ್ರಾಝ್ಲೂದಲ್ಲಿ ಬಿಜೆಪಿಯ ಕ್ಷೇತ್ರ ಉಸ್ತುವಾರಿ ಜಾವೇದ್ ಅಹ್ಮದ್ ದಾರ್ ಮತ್ತು ಪುತ್ರ ಮುಹಮ್ಮದ್ ಅಬ್ದುಲ್ಲಾ ದಾರ್ ಅವರನ್ನು ಉಗ್ರರು ಕೊಂದಿದ್ದಾರೆ.
 
ಹೆಚ್ಚಾಗಿ ಲಷ್ಕರೆ ತೊಯ್ಬಾ, ಜೈಷೆ ಮುಹಮ್ಮದ್ ಮತ್ತು ದಿ ರಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ಉಗ್ರ ಸಂಘಟನೆಗಳು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ ಕಾಶ್ಮೀರದಲ್ಲಿ ಸುಮಾರು 43 ರಾಜಕೀಯ ಕಾರ್ಯಕರ್ತರು ಉಗ್ರರ ಗುಂಡುಗಳಿಗೆ ಬಲಿಯಾಗಿದ್ದು,ಈ ಪೈಕಿ ಅರ್ಧದಷ್ಟು ಜನರು ಬಿಜೆಪಿಗೆ ಸೇರಿದವರಾಗಿದ್ದರು.

ಕಳೆದ 30 ವರ್ಷಗಳಲ್ಲಿ ಎನ್ಸಿ, ಪಿಡಿಪಿ ಮತ್ತು ಕಾಂಗ್ರೆಸ್ ಒಟ್ಟು 7,000ಕ್ಕೂ ಅಧಿಕ ಬೆಂಬಲಿಗರನ್ನು ಉಗ್ರರ ದಾಳಿಗಳಲ್ಲಿ ಕಳೆದುಕೊಂಡಿವೆ, ಆದರೆ ಹೆಚ್ಚಿನ ನಷ್ಟವನ್ನು ಎನ್ಸಿ ಅನುಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಹತ್ಯೆಗಳು ಹೊಸದೇನಲ್ಲ,1989ರಲ್ಲಿ ಉಗ್ರವಾದವು ತಲೆಯೆತ್ತಿದಾಗಲೇ ಅವು ಆರಂಭಗೊಂಡಿದ್ದವು.
 
ಪಿಡಿಪಿಯು 2015ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವವರೆಗೂ ಬಿಜೆಪಿ ಕಾಶ್ಮೀರದ ಜನರ ಪಾಲಿಗೆ ಹೊರಗಿನ ಪಕ್ಷವಾಗಿತ್ತು ಮತ್ತು ಪಕ್ಷಕ್ಕೆ ಸೇರ್ಪಡೆಯನ್ನು ಒಂದು ಕಳಂಕವೆಂಬಂತೆ ನೋಡಲಾಗುತ್ತಿತ್ತು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಠಾಕೂರ್,ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ 2.5 ಲಕ್ಷಕ್ಕೂ ಅಧಿಕ ಜನರು ಬಿಜೆಪಿಗೆ ಸೇರಿದ್ದಾರೆ ಮತ್ತು ಈಗ ಪಕ್ಷದ ಒಟ್ಟು ಸದಸ್ಯತ್ವ 5.5 ಲ.ದಷ್ಟಿದೆ ಎಂದು ತಿಳಿಸಿದರು.

ಕಾಶ್ಮೀರದಲ್ಲಿಯ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಉಗ್ರರು ಅವರನ್ನು ಆಗಾಗ್ಗೆ ಕೊಲ್ಲುತ್ತಲೇ ಇರುತ್ತಾರೆ. ಆದರೆ 370ನೇ ವಿಧಿಯ ರದ್ದತಿ ಸೇರಿದಂತೆ ಬಿಜೆಪಿಯ ನೀತಿಗಳಿಂದಾಗಿ ಅದರ ನಾಯಕರು ಮತ್ತು ಕಾರ್ಯಕರ್ತರು ಹೆಚ್ಚು ದಾಳಿಗಳಿಗೆ ಗುರಿಯಾಗುತ್ತಿದ್ದಾರೆ ಎಂದು ರಾಜಕೀಯ ವಿಜ್ಞಾನಿ ಹಾಗೂ ಕಾಶ್ಮೀರ ವಿವಿಯ ರಾಜ್ಯಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ.ನೂರ್ ಅಹ್ಮದ್ ಬಾಬಾ ಹೇಳಿದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News