ಕೇಂದ್ರವು ಕಾಶ್ಮೀರದ ಜನತೆಯ ವಿಶ್ವಾಸ ಗಳಿಸುವ ಉಪಕ್ರಮಕ್ಕೆ ಮುಂದಾಗಲಿ: ಜನರಲ್ ಶಂಕರ್ರಾಯ್ ಚೌಧರಿ

Update: 2021-08-21 18:05 GMT

ಕೋಲ್ಕತಾ, ಆ.21: ಅಫ್ಗಾನ್ನಲ್ಲಿ ತಾಲಿಬಾನ್ಗಳ ಗೆಲುವು ಪಾಕ್ ಮೂಲದ ಭಯೋತ್ಪಾದಕರಿಗೆ ಕಾಶ್ಮೀರದಲ್ಲಿ ದುಷ್ಕೃತ್ಯ ನಡೆಸಲು ಪ್ರೇರಣೆ ಒದಗಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಕಾಶ್ಮೀರದ ಜನತೆಯನ್ನು ತಲುಪುವ ಮತ್ತು ಭಾರತ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂಬ ಖಾತರಿ ನೀಡುವ ಅಗತ್ಯವಿದೆ ಎಂದು ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಶಂಕರ್ರಾಯ್ ಚೌಧರಿ ಹೇಳಿದ್ದಾರೆ.

1990ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ ಗರಿಷ್ಟ ಮಟ್ಟದಲ್ಲಿದ್ದಾಗ ಜ. ಚೌಧರಿ ಕಾಶ್ಮೀರದಲ್ಲಿ 16 ಕಾರ್ಪ್ಸ್ ವಿಭಾಗದ ಕಮಾಂಡರ್ ಆಗಿದ್ದರು ಮತ್ತು ಅದೇ ದಶಕದಲ್ಲಿ ಭಾರತ ಸೇನೆಯ ಮುಖ್ಯಸ್ಥರಾಗಿ ಭಡ್ತಿ ಪಡೆದಿದ್ದರು. 1965 ಮತ್ತು 1971ರ ಯುದ್ಧದಲ್ಲೂ ಜ. ಚೌಧರಿ ಭಾಗವಹಿಸಿದ್ದರು. ಪಾಕಿಸ್ತಾನವು ಜೈಷೆ ಮುಹಮ್ಮದ್ನಂತಹ ಸಂಘಟನೆಯ ನೆರವಿನಿಂದ ಕಾಶ್ಮೀರದ ಮೇಲೆ ಹಕ್ಕು ಸಾಧಿಸಲು ಹೊಸ ಪ್ರಯತ್ನ ನಡೆಸಬಹುದು. ಈ ಬಗ್ಗೆ ಭಾರತ ಎಚ್ಚರಿಕೆಯಿಂದ ಇರಬೇಕು.

ಅಫ್ಗಾನ್ನಲ್ಲಿರುವ ತಾಲಿಬಾನ್ ವಿರೋಧಿ ಗುಂಪಿನ ಮುಖಂಡರಾದ ಅಹ್ಮದ್ ಮಸೂದ್ ಹಾಗೂ ಭಾರತಕ್ಕೆ ಮಿತ್ರರಾಗಿರುವ ಇತರ ಮುಖಂಡರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ಪಡೆಯಬೇಕು. ತಾಲಿಬಾನ್ಗಳಲ್ಲೂ ಹಲವು ವಿಭಾಗಗಳಿವೆ. ಇಂತವರನ್ನು ವಿಶ್ವಾಸಕ್ಕೆ ಪಡೆಯುವುದು ಅಸಾಧ್ಯವಲ್ಲ ಎಂದವರು ಹೇಳಿದ್ದಾರೆ. ಜ. ರಾಯ್ ಈಗ ‘ ರಿಸರ್ಚ್ ಸೆಂಟರ್ ಫಾರ್ ಈಸ್ಟರ್ನ್ ಆ್ಯಂಡ್ ನಾರ್ಥ್ಈಸ್ಟರ್ನ್ ಸ್ಟಡೀಸ್’ ಎಂಬ ಚಿಂತಕರ ಚಾವಡಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಷ್ಕರೆ ತೈಯಬ, ಜೆಇಎಂನಂತಹ ಪಾಕಿಸ್ತಾನ ನೆರವಿನ ಉಗ್ರ ಸಂಘಟನೆಗಳು ಹಾಗೂ ತಾಲಿಬಾನ್ ನಡುವಿನ ಸಮನ್ವಯದ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಹೆಚ್ಚಬಹುದು ಎಂದು ಫ್ರಾನ್ಸ್ನ ಚಿಂತಕರ ವೇದಿಕೆ ‘ ಸೆಂಟರ್ ಫಾರ್ ಅನಾಲಿಸೀಸ್ ಆಫ್ ಟೆರರಿಸಂ’ ಕಳೆದ ವಾರ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News