ಲಸಿಕೆ ಸರ್ಟಿಫಿಕೇಟ್‌ ನಲ್ಲಿ ಮೋದಿ ಫೋಟೊ: ಸಂಕಷ್ಟ ಅನುಭವಿಸುತ್ತಿರುವ ಭಾರತೀಯ ವಿದೇಶಿ ಪ್ರಯಾಣಿಕರು

Update: 2021-08-22 18:23 GMT
Photo: Screengrab

ಹೊಸದಿಲ್ಲಿ: ಕೋವಿಡ್‌ ನ ನಂತರ ವಿದೇಶ ಪ್ರಯಾಣವು ದುಸ್ತರವಾಗಿದೆ. ಹಲವಾರು ದೇಶಗಳು ಸಂಪೂರ್ಣ ಲಸಿಕೀಕರಣಗೊಂಡವರನ್ನು ಮಾತ್ರ ಬರಲು ಅನುಮತಿಸುತ್ತಿದೆ. ಈ ವೇಳೆ ಅದಕ್ಕೆ ಸಂಬಂಧಪಟ್ಟ ಪ್ರಮಾಣಪತ್ರ ತೋರಿಸುವುದು ಅಗತ್ಯವಾಗಿದೆ. ಎಮಿಗ್ರೇಶನ್‌ ಸಂದರ್ಭದಲ್ಲಿ ಈ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಇದೀಗ ವಿದೇಶ ಪ್ರಯಾಣ ಮಾಡುವ ಭಾರತೀಯರು ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ ನಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವಿರುವ ಕಾರಣದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ದೀಪ್ತಿ ತಮಾನೆ ಎನ್ನುವ ಭಾರತೀಯ ಮಹಿಳೆಯು ಈ ಕುರಿತಾದಂತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಫ್ರಾಂಕ್‌ ಫರ್ಟ್‌ ನ ವಿಮಾನ ನಿಲ್ದಾಣದಲ್ಲಿ ಲಸಿಕೆ ಪ್ರಮಾಣ ಪತ್ರವನ್ನು ಅವತು ತೋರಿಸಿದ ವೇಳೆ ಅದರಲ್ಲಿರುವ ಪ್ರಧಾನಿ ಮೋದಿಯ ಫೋಟೊವನ್ನು ನೋಡಿ ಪ್ರಮಾಣಪತ್ರದ ಅಧಿಕೃತತೆಯನ್ನೇ ಅಧಿಕಾರಿಗಳು ಅನುಮಾನಿಸಿದ್ದು, ಇದು ನಕಲಿ ಸರ್ಟಿಫಿಕೇಟ್‌ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

"ಗ್ರಾಹಕ ಸೇವೆ ಡೆಸ್ಕ್‌ ನಲ್ಲಿ ಕುಳಿತಿದ್ದ ಮಹಿಳೆಯು ಇದನ್ನು ನೋಡಿ ಶಾಕ್‌ ಆದರು. ಅವರು ನನ್ನ ಲಸಿಕೆ ಸರ್ಟಿಫಿಕೇಟ್‌ ಅನ್ನು ಹಲವು ಬಾರಿ ನೋಡಿದರು. ನಾನು ಹಲವಾರು ಸರ್ಟಿಫಿಕೇಟ್‌ ಗಳನ್ನು ನೋಡಿದ್ದೇನೆ. ದಿನವೂ ಇಲ್ಲಿ ಹಲವು ಮಂದಿ ಪ್ರಯಾಣಿಕರು ಹಾದು ಹೋಗುತ್ತಾರೆ. ಆದರೆ ಸರ್ಟಿಫಿಕೇಟ್‌ ನಲ್ಲಿ ಪ್ರಧಾನಿಯ ಫೊಟೊ ನೋಡಿದ್ದು ಇದೇ ಮೊದಲು ಎಂದು ಅವರು ಹೇಳಿದ್ದು, ನನ್ನ ಸರ್ಟಿಫಿಕೇಟ್‌ ನಕಲಿಯಿರಬಹುದು ಎಂದು ಅವರು ಸಂಶಯಿಸಿದರು" ಎಂದು ಅವರು ಹೇಳಿದ್ದಾರೆ.

ಇದು ಮಾತ್ರವಲ್ಲದೇ ರೆಡ್ಡಿಟ್‌ ಬಳಕೆದಾರ ಜುಜಾರ್‌ ಸಿಂಗ್‌ ಎಂಬವರು "ಸೈಬೀರಿಯನ್‌ ಎಮಿಗ್ರೇಶನ್‌ ನಲ್ಲಿ ಅಧಿಕಾರಿಗಳು ನನ್ನ ಸ್ನೇಹಿತನನ್ನು ತಡೆದು ನಿಲ್ಲಿಸಿದರು. ಯಾಕೆಂದರೆ ಸರ್ಟಿಫಿಕೇಟ್‌ ನಲ್ಲಿರುವ ವ್ಯಕ್ತಿ ಮತ್ತು ಈ ವ್ಯಕ್ತಿಯ ಚಹರೆ ಹೋಲುತ್ತಿರಲಿಲ್ಲ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News