ಕುಂಭಮೇಳದ ವೇಳೆ ನಕಲಿ ಕೋವಿಡ್ ಪರೀಕ್ಷೆ ನಡೆಸಿದ ಆರೋಪಕ್ಕೊಳಗಾದ 2 ಲ್ಯಾಬ್ ಗಳು ಐಸಿಎಂಆರ್ ನ ಅನುಮೋದಿತ ಪಟ್ಟಿಯಲ್ಲಿ!

Update: 2021-08-22 18:19 GMT

ಹೊಸದಿಲ್ಲಿ, ಆ. 22: ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಎಪ್ರಿಲ್ನಲ್ಲಿ ಕುಂಭ ಮೇಳ ನಡೆದ ಸಂದರ್ಭ ಕೋವಿಡ್ ಪರೀಕ್ಷೆಯ ನಕಲಿ ನೋಂದಣಿ ಮಾಡಿದ ಆರೋಪಕ್ಕೊಳಗಾದ ಎರಡು ಪ್ರಯೋಗಾಲಯಗಳು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್)ಯ ಅನುಮೋದಿತ ಪ್ರಯೋಗಶಾಲೆಗಳ ಪಟ್ಟಿಯಲ್ಲಿ ಮುಂದುವರಿದಿರುವುದು ಬೆಳಕಿಗೆ ಬಂದಿದೆ.

ತಾನು ಕೋವಿಡ್ ಪರೀಕ್ಷೆಗೆ ಒಳಗಾಗದಿದ್ದರೂ ಕೋವಿಡ್ ಪರೀಕ್ಷೆಯ ವರದಿ ಪಡೆದುಕೊಳ್ಳುವಂತೆ ಸಂದೇಶ ಸ್ವೀಕರಿಸಿದ್ದೆ ಎಂದು ಫರೀದ್ ಕೋಟದ ನಿವಾಸಿಯೊಬ್ಬರು ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ ಬಳಿಕ ಎಪ್ರಿಲ್ ಅಂತ್ಯದಲ್ಲಿ ಕುಂಭ ಮೇಳದಲ್ಲಿ ನಕಲಿ ಕೋವಿಡ್ ಪರೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಈ ದೂರಿನ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ 1 ಲಕ್ಷ ನಕಲಿ ಆ್ಯಂಟಿಜನ್ ಪರೀಕ್ಷೆ ನಡೆಸಿರುವುದು ಕೂಡ ಬಹಿರಂಗಗೊಂಡಿತ್ತು.

ದಿಲ್ಲಿ ಮೂಲದ ಲಾಲ್ ಚಂದಾನಿ ಲ್ಯಾಬ್ಸ್, ಹಿಸ್ಸಾರ್ ಮೂಲದ ನಲ್ವಾ ಲ್ಯಾಬ್ಸ್ ಹಾಗೂ ನೋಯ್ಡ್ ಮೂಲದ ಖಾಸಗಿ ಸಂಸ್ಥೆ ಮ್ಯಾಕ್ಸ್ ಕಾರ್ಪೋರೇಟ್ ಸರ್ವೀಸಸ್- ಈ ಮೂರು ಸಂಸ್ಥೆಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಕಳೆದ ವಾರ ಪ್ರಕರಣ ದಾಖಲಿಸಲಾಗಿತ್ತು.

ದಿನಗಳ ಬಳಿಕ ಮೂರು ಸಂಸ್ಥೆಗಳು ಎಫ್ಐಆರ್ ರದ್ದುಗೊಳಿಸುವಂತೆ ಹಾಗೂ ಆರೋಪ ನಿರಾಕರಿಸಿ ಪ್ರತ್ಯೇಕವಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದವು.

ಪ್ರಸ್ತುತ ಮೂರು ಲ್ಯಾಬ್ ಗಳ ಬಗ್ಗೆ ಪೊಲೀಸರು, ಜಿಲ್ಲಾಡಳಿತ ಹಾಗೂ ಕುಂಭ ಮೇಲಾಡಳಿತ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.

ಉತ್ತರಾಖಂಡ ಸರಕಾರದಿಂದ ನಿಯೋಜಿತವಾಗಿದ್ದ ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸಸ್ ಕೋವಿಡ್ ಪರೀಕ್ಷೆಗಳನ್ನು ಆರೋಪಕ್ಕೆ ಒಳಗಾದ ಲ್ಯಾಬ್ ಗಳಿಗೆ ಹೊರ ಗುತ್ತಿಗೆ ನೀಡುತ್ತಿತ್ತು. ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸಸ್‌ ಗೆ ಲ್ಯಾಬ್ ಇಲ್ಲ ಹಾಗೂ ಅದು ಐಸಿಎಂಆರ್ನಿಂದ ಅಂಗೀಕೃತಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News