ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗು 12ನೇ ಮಹಡಿಯಿಂದ ಬಿದ್ದು ಮೃತ್ಯು

Update: 2021-08-24 03:52 GMT
ಸಾಂದರ್ಭಿಕ ಚಿತ್ರ (PTI)

ಗ್ರೇಟರ್ ನೋಯ್ಡ, ಆ.24: ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗುವೊಂದು 12ನೇ ಮಹಡಿಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದ ಕುಟುಂಬದಲ್ಲಿ ಒಂದು ವರ್ಷ ವಯಸ್ಸಿನ ರಿವಾನ್‌ನ ಅಕಾಲಿಕ ಮರಣದಿಂದಾಗಿ ಅರೆಕ್ಷಣದಲ್ಲೇ ಸೂತಕದ ಛಾಯೆ ಅವರಿಸಿತು. ಬಿಸ್ರಖ್ ಠಾಣೆ ವ್ಯಾಪ್ತಿಯ ಕಾಸಾ ಗ್ರೀನ್ಸ್ 1 ಹೌಸಿಂಗ್ ಸೊಸೈಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸತ್ಯೇಂದ್ರ ಕಸಾನಾ ಅವರ ಒಂದು ವರ್ಷದ ಗಂಡುಮಗುವಿನ ಹುಟ್ಟುಹಬ್ಬಕ್ಕಾಗಿ ಕುಟುಂಬ ಸದಸ್ಯರು ಮನೆಯನ್ನು ಅಲಂಕರಿಸುತ್ತಿದ್ದರು. ಕೆಲ ಮಂದಿ ಅತಿಥಿಗಳು ಕೂಡಾ ಆಗಮಿಸಿದ್ದರು. ಪುಟ್ಟ ಮಗು ರಿವಾನ್ ಫ್ಲ್ಯಾಟ್‌ನ ಮುಖ್ಯದ್ವಾರದ ಹೊರಗೆ ಆಟವಾಡುತ್ತಿತ್ತು. ಆಟವಾಡುತ್ತಿದ್ದ ಮಗು 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿತು ಎನ್ನಲಾಗಿದೆ.

ಕಸಾನಾ ಅವರ ಮನೆಯ ಬಾಗಿಲಿನ ಕೆಲವೇ ಹೆಜ್ಜೆ ಅಂತರದಲ್ಲಿ ಮೆಟ್ಟಲುಗಳ ಪಕ್ಕದ ಗೋಡೆ ಇದ್ದು, ಇಲ್ಲಿಂದ ಮಗು ಬಿದ್ದಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.
ಮೆಟ್ಟಲಿನ ಪಕ್ಕ ಕಬ್ಬಿಣದ ರೇಲಿಂಗ್ಸ್ ಇದ್ದು, ಇದಕ್ಕೆ ಸಮಾನಾಂತರದಲ್ಲಿ ಮಧ್ಯೆ ಸ್ಥಳಾವಕಾಶವಿದ್ದು, ಅಕ್ಕಪಕ್ಕದಲ್ಲಿ ಕಬ್ಬಿಣದ ಸಲಾಕೆಗಳು ಇರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News