ನಿಮಗೆ ಗೊತ್ತೇ? ಮೂಗಿನ ಒಳ್ಳೆಯ ಬ್ಯಾಕ್ಟೀರಿಯಾ ಕೋವಿಡ್ ತೀವ್ರತೆ ಕಡಿಮೆ ಮಾಡಬಲ್ಲದು!

Update: 2021-08-24 05:22 GMT

ಪುಣೆ, ಆ.24: ಮೂಗಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಕೋವಿಡ್-19 ಪಾಸಿಟಿವ್ ವ್ಯಕ್ತಿಯ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲದು ಎಂಬ ಅಂಶ ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರ ಮತ್ತು ಬಿ.ಜೆ. ಮೆಡಿಕಲ್ ಕಾಲೇಜು ನಡೆಸಿದ ಜಂಟಿ ಸಂಶೋಧನೆಯಿಂದ ಬೆಳಕಿಗೆ ಬಂದಿದೆ

ಕೆಲ ವ್ಯಕ್ತಿಗಳು ಸಾರ್ಸ್-ಕೋವ್-2 ವೈರಸ್ ಸೋಂಕಿಗೆ ಒಳಗಾದರೂ ಇವರಲ್ಲಿ ಏಕೆ ರೋಗಲಕ್ಷಣ ಕಾಣಿಸಿಕೊಳ್ಳುವುದಿಲ್ಲ ಎನ್ನುವುದನ್ನು ಕೂಡಾ ಇದು ವಿವರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ ಒಳ್ಳೆಯ ಬ್ಯಾಕ್ಟೀರಿಯಾ, ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಕೋವಿಡ್-19 ಸೋಂಕಿತರಲ್ಲಿ ಕೆಲ ನಿರ್ದಿಷ್ಟ ಅವಕಾಶವಾದಿ ರೋಗಕಾರಗಳು ಅಧಿಕ ಸಂಖ್ಯೆಯಲ್ಲಿ ಇದ್ದಲ್ಲಿ, ಈ ಉದ್ದೀಪನ ವಾತಾವರಣವು ರೋಗಕಾರಕ ಬ್ಯಾಕ್ಟೀರಿಯಾಗಳ ಹೆಚ್ಚುವಿಕೆಗೆ ಕಾರಣವಾಗುತ್ತದೆ ಹಾಗೂ ಇದು ಪೂರಕ ಸೋಂಕಿಗೆ ಕಾರಣವಾಗುತ್ತದೆ ಎಂಬ ಅಂಶವನ್ನು ಕೂಡಾ ಅಧ್ಯಯನ ಬಹಿರಂಗಪಡಿಸಿದೆ. ಪೂರಕ ಸೋಂಕು ಸಾಮಾನ್ಯವಾಗಿ ಪ್ರಾಥಮಿಕ ಸೋಂಕು ಕಂಡುಬಂದ ಬಳಿಕ ರೋಗಕ್ಕೆ ಈಡಾಗಬಲ್ಲ ಸಾಧ್ಯತೆಯನ್ನು ಹೆಚ್ಚಿಸುವ ಸೋಂಕು ಆಗಿರುತ್ತದೆ.

"ಕೋವಿಡ್-19 ರೋಗಿಗಳಲ್ಲಿ ಇಂಥ ರೋಗಕಾರಕ ಬ್ಯಾಕ್ಟೀರಿಯಾಗಳು ಮೂಗಿನ ಸೂಕ್ಷ್ಮ ಕಣಗಳಲ್ಲಿ ಮೂಗಿನ ಲೋಳೆಯ ಮೂಲಕ ಸಂಗ್ರಹಗೊಂಡು ಈ ಸೂಕ್ಷ್ಮಾಣುಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತವೆ. ದೇಹದಲ್ಲಿನ ಅತ್ಯಧಿಕ ಉರಿಯ ವಾತಾವರಣವು ಈ ಬೆಳವಣಿಗೆಗೆ ಪೂರಕವಾಗುತ್ತದೆ" ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಎನ್‌ಸಿಸಿಎಸ್ ವಿಜ್ಞಾನಿ ಅವಿನಾಶ್ ಶರ್ಮಾ ಹೇಳಿದ್ದಾರೆ.

ಮೂಗಿನ ಅವಕಾಶವಾದಿ ರೋಗಕಾರಕ ಬ್ಯಾಕ್ಟೀರಿಯಾಗಳು ಈ ಮಾರ್ಗದ ಮೂಲಕ ವೈರಸ್ ಪ್ರವೇಶಿಸಲು ಉತ್ತೇಜನ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News