ಬ್ಯಾನರ್-ಸಂಸ್ಕೃತಿ ನಿಲ್ಲಿಸುವಂತೆ ಕಾರ್ಯಕರ್ತರನ್ನು ಒತ್ತಾಯಿಸಿದ ಸಿಎಂ ಸ್ಟಾಲಿನ್

Update: 2021-08-24 05:19 GMT

ಚೆನ್ನೈ: ವಿಲ್ಲುಪುರಂನಲ್ಲಿ ಡಿಎಂಕೆ ಧ್ವಜಗಳನ್ನು ಕಟ್ಟುತ್ತಿರುವಾಗ 13 ವರ್ಷದ ಬಾಲಕ ದಿನೇಶ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯದಲ್ಲಿ ಬ್ಯಾನರ್ ಸಂಸ್ಕೃತಿಯನ್ನು ನಿಲ್ಲಿಸಬೇಕೆಂದು ತಮ್ಮ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್ "ಬ್ಯಾನರ್-ಸಂಸ್ಕೃತಿಯನ್ನು ನಿಲ್ಲಿಸಲು ಪದೇ ಪದೇ, ಆದೇಶವನ್ನು ನೀಡಿದ ಹೊರತಾಗಿಯೂ, ಅನೇಕ ಸ್ಥಳಗಳಲ್ಲಿ ಇದು ಮುಂದುವರಿದಿದೆ ಎಂದು ತಿಳಿದು ನನಗೆ ಬೇಸರವಾಗಿದೆ. ಪಕ್ಷದ ಕಾರ್ಯಕರ್ತರು ನನ್ನ ಆದೇಶವನ್ನು ಒಪ್ಪಿಕೊಳ್ಳಬೇಕು ಹಾಗೂ  ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಬೇಕು'' ಎಂದು ಸೋಮವಾರ ಪೋಸ್ಟ್ ಮಾಡಿದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

13 ವರ್ಷದ ಬಾಲಕ ದಿನೇಶ್ ಆಗಸ್ಟ್ 20, ಶುಕ್ರವಾರದಂದು ವಿಲ್ಲುಪುರದ ರಹೀಮ್ ಲೇಔಟ್ ನಲ್ಲಿ ಡಿಎಂಕೆ ಧ್ವಜಗಳನ್ನು ಕಟ್ಟುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ ಎಂದು ಟಿಎನ್ ಎಂ ವರದಿ ಮಾಡಿದೆ.

ಸಚಿವ ಕೆ. ಪೊನ್ಮುಡಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಡಿಎಂಕೆ ಪದಾಧಿಕಾರಿಗಳು ವಿಲ್ಲುಪುರಂ ಮಾಂಬಲಪಟ್ಟು ರಸ್ತೆಯಲ್ಲಿರುವ ಮದುವೆ ಮಂಟಪದ ಬಳಿ ರಸ್ತೆಯನ್ನು ಅಲಂಕರಿಸಲು ಸಣ್ಣ ಏಜೆನ್ಸಿಯನ್ನು ನೇಮಿಸಿದ್ದರು. 9 ನೇ ತರಗತಿಯಲ್ಲಿ ಓದುತ್ತಿದ್ದ ದಿನೇಶ್ ಏಜೆನ್ಸಿ ಪರ ಪಕ್ಷದ ಧ್ವಜವನ್ನು ಹಾಕಲು ಯತ್ನಿಸುತ್ತಿದ್ದಾಗ ಅವರ ಮೇಲೆ ವಿದ್ಯುತ್ ತಂತಿ ಬಿದ್ದು ಸಾವನ್ನಪ್ಪಿದ್ದಾನೆ.

 ಡಿಎಂಕೆ ನಾಯಕತ್ವವು ಕಟ್-ಔಟ್ ಹಾಗೂ  ಧ್ವಜಗಳನ್ನು ಸ್ಥಾಪಿಸುವುದನ್ನು ನಿಷೇಧಿಸಿದೆ ಎಂದು ಹೇಳಿದ್ದರೂ ಸಹ, ಅನೇಕ ಪಕ್ಷದ ಕಾರ್ಯಕರ್ತರು ಹಾಗೂ  ನಾಯಕರು ಕೂಡ ಅದನ್ನು ಮುಂದುವರಿಸಿದ್ದಾರೆ. ಇದಲ್ಲದೆ, ಧ್ವಜಗಳನ್ನು ಹಾಕಲು ಪೋಲಿಸರು ಅಥವಾ ಪುರಸಭೆಯ ಅನುಮತಿಯನ್ನು ಕೇಡರ್‌ಗಳು ತೆಗೆದುಕೊಳ್ಳಲಿಲ್ಲ ಎನ್ನಲಾಗಿದೆ.

ದಿನೇಶ್ ಅವರನ್ನು ಕೆಲಸಕ್ಕೆ ತೆಗೆದುಕೊಂಡಿರುವ ಕುರಿತಾಗಿ ನೇಮಿಸಿದ ಖಾಸಗಿ ಏಜೆನ್ಸಿ ಅಥವಾ ಕಾರ್ಯಕರ್ತರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

2019ರಲ್ಲಿ ಎಐಎಡಿಎಂಕೆ ಅಳವಡಿಸಿದ್ದ ಹೋಲ್ಡಿಂಗ್ ವೊಂದು 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆರ್. ಸುಬಶ್ರೀ  ಮೇಲೆ ಬಿದ್ದು ಸಾವನ್ನಪ್ಪಿದ ನಂತರ, ತಾನು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬ್ಯಾನರ್-ಸಂಸ್ಕೃತಿಯನ್ನು ನಿರ್ಮೂಲನೆ ಮಾಡುವುದಾಗಿ ಡಿಎಂಕೆ ಭರವಸೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News