ದಲಿತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಪಂಚಾಯತ್ ಕಚೇರಿಯ ಹೊರಗೆ ನೆರವೇರಿಸಿದ ಕುಟುಂಬ

Update: 2021-08-24 07:51 GMT
Photo: thewire.in/ Screengrab from video

ಮುಂಬೈ: ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಮಾಲೆವಾಡಿ ಗ್ರಾಮದಲ್ಲಿ ಆಗಸ್ಟ್ 20ರಂದು ಪರಿಶಿಷ್ಟ ಮಾತಂಗ್ ಸಮುದಾಯಕ್ಕೆ ಸೇರಿದ 74 ವರ್ಷದ ಅಂಗವಿಕಲ ವ್ಯಕ್ತಿ ಧನಂಜಯ್ ಸಾಠೆ ಮೃತಪಟ್ಟಾಗ ಆತನ ಅಂತ್ಯಸಂಸ್ಕಾರವನ್ನು ಗ್ರಾಮದ ರುದ್ರಭೂಮಿಯಲ್ಲಿ ನಡೆಸಲು ಮೇಲ್ಜಾತಿಯವರು ಅನುಮತಿಸದೇ ಇದ್ದ ಕಾರಣ ಆತನ ಕುಟುಂಬಸ್ಥರು ಅಂತ್ಯಸಂಸ್ಕಾರವನ್ನು ಗ್ರಾಮದ ಪಂಚಾಯತ್ ಕಚೇರಿ ಕಟ್ಟಡದ ಹೊರಗಡೆ ನೆರವೇರಿಸಿದ್ದಾರೆ.

ಧನಂಜಯ್ ಮೃತಪಟ್ಟಾಗ ಆತನ ಸೋದರ ಹಾಗೂ ಗ್ರಾಮದ ಸರಪಂಚ ದಶರಥ ಸಾಠೆ ಮತ್ತಿತರ ಕುಟುಂಬ ಸದಸ್ಯರು ಗ್ರಾಮದಲ್ಲಿ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಮಾಲಿ ಸಮುದಾಯದ ಜನರ ಕೃಷಿ ಭೂಮಿಗಳ ಪಕ್ಕದಲ್ಲಿರುವ ಗ್ರಾಮದ ರುದ್ರಭೂಮಿಗೆ ಕೊಂಡೊಯ್ಯಲು ನಿರ್ಧರಿಸಿದ್ದರು.

ಆದರೆ ಇದಕ್ಕೆ ಮೇಲ್ಜಾತಿ ಹಿಂದುಗಳು ವಿರೋಧಿಸಿದಾಗ ಸಾಠೆ ಕುಟುಂಬ ಅವರ ಜತೆ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿತ್ತು, ನಂತರ ಸುಮಾರು 18 ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟಿಸಿ ಅಂತಿಮವಾಗಿ ಪಂಚಾಯತ್ ಕಚೇರಿ ಹೊರಗಡೆಯೇ ಅಂತ್ಯಸಂಸ್ಕಾರ ನಡೆಸಿತ್ತು.

ಕೆಲ ಸಮಯದ ಹಿಂದೆ ದಶರಥ್ ಸಾಠೆ ಸರಪಂಚ ಆಗಿ ಆಯ್ಕೆಯಾದ ನಂತರ ಆತ ಗ್ರಾಮದ ಮೇಲ್ಜಾತಿಯ ಹಿಂದುಗಳ ತಾಳಕ್ಕೆ ತಕ್ಕಂತೆ ಕುಣಿಯಲು ನಿರಾಕರಿಸಿದ್ದರಿಂದ ಈ ರೀತಿ ಕಿರುಕುಳ ನೀಡಲಾಗಿದೆ ಎಂದು ಕುಟುಂಬ ಆರೋಪಿಸುತ್ತಿದೆಯಲ್ಲದೆ ಸದಾ ಭಯದ ನೆರಳಿನಲ್ಲಿಯೇ ವಾಸಿಸುತ್ತಿದೆ.

ತಮ್ಮ ಮೇಲೆ ಮೇಲ್ಜಾತಿಯ ಹಿಂದುಗಳು ಪ್ರತೀಕಾರ ತೀರಿಸುವ  ಸಾಧ್ಯತೆಯಿದೆಯೆಂದು ಕುಟುಂಬಗಳಿಗೆ ಭಯವಿರುವ ಹಿನ್ನೆಲೆಯಲ್ಲಿ ವಂಚಿತ್ ಬಹುಜನ್ ಅಘಾಡಿ ಜಿಲ್ಲಾಡಳಿತಕ್ಕೆ ಪತ್ರ ಬರೆದು ಧನಂಜಯ್ ಮತ್ತಾತನ ಸೋದರನ ಕುಟುಂಬಗಳಿಗೆ ರಕ್ಷಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News