×
Ad

ದಲಿತ ಚಳವಳಿ ಬರಹಗಾರ್ತಿ, ಖ್ಯಾತ ಸಂಶೋಧಕಿ ಡಾ. ಗೇಲ್‌ ಓಮ್ವೆಡ್‌ ನಿಧನ

Update: 2021-08-25 14:07 IST
Photo: Twitter/praful patel

ಸಾಂಗ್ಲಿ: ಅಮೆರಿಕದಲ್ಲಿ ಹುಟ್ಟಿ ಬೆಳೆದು ಬಳಿಕ ಭಾರತದಲ್ಲಿ ದಲಿತ ಚಳವಳಿ ಮತ್ತು ಅಂಬೇಡ್ಕರ್ ವಾದದ ಖ್ಯಾತ ಸಂಶೋಧಕಿ ಹಾಗೂ ಬರಹಗಾರ್ತಿಯಾದ ಡಾ. ಗೇಲ್‌ ಓಮ್ವೆಡ್‌ ಬುಧವಾರ ಅಲ್ಪಕಾಲದ ಅನಾರೋಗ್ಯದಿಂದ ಕಾಸೆಗಾಂವ್‌ ನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರ ಸಹಾಯಕಿ ಮಾಹಿತಿ ನೀಡಿದ್ದಾರೆಂದು timesofindia.com ವರದಿ ಮಾಡಿದೆ.

ಅವರಿಗೆ 81 ವರ್ಷ ವಯಸ್ಸಾಗಿದ್ದು, ಪತಿ ಡಾ. ಭರತ್ ಪಟಂಕರ್‌, ಪುತ್ರಿ ಪ್ರಾಚಿ, ಅಳಿಯ ತೇಜಸ್ವಿ ಹಾಗೂ ಮೊಮ್ಮಗಳು ನಿಯಾ ಅಮೆರಿಕದಲ್ಲಿ ನೆಲೆಸಿದ್ದಾರೆ.

ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ ಡಾ. ಓಮ್ವೆಡ್, ತನ್ನ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದಿದ್ದು, ಬಳಿಕ ದಲಿತರು, ಬಡವರು, ರೈತರು, ಮಹಿಳೆಯರು ಮತ್ತು ಇತರ ಸಾರ್ವಜನಿಕ ಕಾರಣಗಳಿಗಾಗಿ ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

೧೯೮೩ರಲ್ಲಿ ಭಾರತೀಯ ಪ್ರಜೆಯಾದ ಅವರು, ತಮ್ಮ ಪತಿಯೊಂದಿಗೆ ಸೇರಿಕೊಂಡು 1980 ರ ದಶಕದ ಆರಂಭದಲ್ಲಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. ಅವರು ಹಲವಾರು ಸಾಮಾಜಿಕ ವಿಚಾರಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಕಾಲೇಜುಗಳು ಮತ್ತು ವಿಶ್ವ ವಿದ್ಯಾನಿಲಯಗಳಲ್ಲಿ ಭೋದಿಸಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣವನ್ನೂ ಬರೆದಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವಾದ ಆಕ್ಸ್‌ ಫ್ಯಾಮ್‌ ನೋವಿಬ್‌ ಹಾಗೂ ಇತರ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅವರು ಕಾರ್ಯ ನಿರ್ವಹಿಸಿದ್ದಾರೆ.

ಡಾ.ಓಮ್ವೆಡ್ತ್ ಅವರ ಅಂತ್ಯಸಂಸ್ಕಾರವನ್ನು ಗುರುವಾರ ಬೆಳಿಗ್ಗೆ ಸಾಂಗ್ಲಿಯ ಕ್ರಾಂತಿವೀರ್ ಬಾಪೂಜಿ ಪತಂಕರ್ ಸಂಸ್ಥೆ ಕ್ಯಾಂಪಸ್‌ನಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News