ಲೋಕೂರು ಸಮಿತಿ ತನಿಖೆ ಮುಂದುವರಿಸದು ಸುಪ್ರೀಂಗೆ ಭರವಸೆ ನೀಡಿದ ಪಶ್ಚಿಮಬಂಗಾಳ ಸರಕಾರ
ಹೊಸದಿಲ್ಲಿ, ಆ. 25: ಪೆಗಾಸಸ್ ಬೇಹುಗಾರಿಕೆ ಆರೋಪ ಪ್ರಕರಣದ ಮನವಿಗಳ ಗುಚ್ಛದ ವಿಚಾರಣೆಯನ್ನು ನ್ಯಾಯಾಲಯ ನಡೆಸುವ ವರೆಗೆ ಪೆಗಾಸಸ್ ಬೇಹುಗಾರಿಕೆ ಆರೋಪದ ಕುರಿತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ಇಬ್ಬರು ಸದಸ್ಯರ ತನಿಖಾ ಆಯೋಗದ ತನಿಖೆ ಮುಂದುವರಿಸುವುದಿಲ್ಲ ಎಂದು ಪಶ್ಚಿಮಬಂಗಾಳ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ಪೆಗಾಸಸ್ ವಿವಾದದ ಕುರಿತು ಪಶ್ಚಿಮಬಂಗಾಳ ಸರಕಾರ ತನಿಖಾ ಆಯೋಗ ರೂಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯ ಜೊತೆಗೆ ವಿಚಾರಣೆಗೆ ಬಾಕಿ ಇರುವ ಇತರ ಮನವಿಗಳನ್ನು ಸೇರಿಸಿತು. ಅಲ್ಲದೆ, ಇವುಗಳನ್ನು ಮುಂದಿನ ವಾರ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.
ಪೆಗಾಸಸ್ ಪ್ರಕರಣವನ್ನು ನಾವು ಈಗಾಗಲೇ ವಿಚಾರಣೆ ನಡೆಸುತ್ತಿರುವುದರಿಂದ ದಯವಿಟ್ಟು ಸಂಯಮ ಕಾಪಾಡಿ ಎಂದು ಪಶ್ಚಿಮಬಂಗಾಳ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪೀಠ ತಿಳಿಸಿತು. ದೂರುದಾರ ಸರಕಾರೇತರ ಸಂಸ್ಥೆ ಗ್ಲೋಬಲ್ ವಿಲೇಜ್ ಫೌಂಡೇಶನ್ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಎರಡು ಸಮಾನಾಂತರ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.