‘ಬೆಂಕಿಯಿಂದ ರೋಗಿಗಳನ್ನು ಕೊಲ್ಲುತ್ತಿದ್ದೀರಿ’: ಸುರಕ್ಷತಾ ನಿಯಮಗಳ ಬಗ್ಗೆ ಗುಜರಾತಿಗೆ ಸುಪ್ರೀಂ ತರಾಟೆ
ಹೊಸದಿಲ್ಲಿ,ಆ.27: ಕೋವಿಡ್ ನಡುವೆ ಆಸ್ಪತ್ರೆ ಕಟ್ಟಡಗಳ ಸುರಕ್ಷತಾ ನಿಯಮಗಳನ್ನು ಸಡಿಲಿಸುವ ಗುಜರಾತ ಸರಕಾರದ ಕ್ರಮವನ್ನು ಶುಕ್ರವಾರ ಕಟುವಾಗಿ ಟೀಕಿಸಿದ ಸರ್ವೋಚ್ಚ ನ್ಯಾಯಾಲಯವು ಸರಕಾರದ ಆದೇಶಕ್ಕೆ ತಡೆ ನೀಡಿತಲ್ಲದೆ,‘ಸಾಂಕ್ರಾಮಿಕದಲ್ಲಿ ಜೀವಗಳನ್ನು ಉಳಿಸಲು ನಾವು ಜನರನ್ನು ಬೆಂಕಿಯಿಂದ ಕೊಲ್ಲುತ್ತಿದ್ದೇವೆ ’ಎಂದು ಆಕ್ರೋಶವನ್ನು ವ್ಯಕ್ತಪಡಿಸಿತು.
‘ಕಟ್ಟಡ ಬಳಕೆ ಪರವಾನಿಗೆ ’ಯನ್ನು ಹೊಂದಿರದ ಕಟ್ಟಡಗಳ ವಿರುದ್ಧ ಮುಂದಿನ ವರ್ಷದ ಮಾರ್ಚ್‌ವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಗುಜರಾತ್ ಸರಕಾರವು ತನ್ನ ಜು.8ರ ತನ್ನ ಅಧಿಸೂಚನೆಯಲ್ಲಿ ತಿಳಿಸಿತ್ತು.
ಅಗ್ನಿ ಸುರಕ್ಷತಾ ನಿಯಮಗಳನ್ನು ಸಡಿಲಿಸಲಾಗಿದೆ ಎನ್ನುವುದು ತನ್ನ ಅಧಿಸೂಚನೆಯ ಅರ್ಥವಲ್ಲ ಎಂದು ಸರಕಾರವು ಸ್ಪಷ್ಟನೆ ನೀಡಿತ್ತು.
‘ಗುಜರಾತ್ ಸರಕಾರದ ಅಧಿಸೂಚನೆಯು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ವಿರುದ್ಧವಾಗಿದೆ. ಸಾಂಕ್ರಾಮಿಕದಲ್ಲಿ ಜನರನ್ನು ರಕ್ಷಿಸುವ ಪ್ರಯತ್ನದಲ್ಲಿ ನಾವು ಜನರನ್ನು ಬೆಂಕಿಯಿಂದ ಕೊಲ್ಲುತ್ತಿದ್ದೇವೆ ’ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಕಳೆದ ವರ್ಷದ ನವಂಬರ್‌ನಲ್ಲಿ ರಾಜಕೋಟ್‌ನ ಉದಯ ಶಿವಾನಂದ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಆರು ಜನರು ಮೃತಪಟ್ಟಿದ್ದರು. ಐಸಿಯು ವಾರ್ಡ್‌ನಲ್ಲಿ ಬೆಂಕಿ ಆರಂಭವಾಗಿತ್ತು ಎಂದು ಪೊಲೀಸರು ಹೇಳಿದ್ದರು. ತನಿಖೆಗಳು ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯವನ್ನು ಬೆಟ್ಟು ಮಾಡಿದ್ದವು. ಮೇ ತಿಂಗಳಿನಲ್ಲಿ ಭರೂಚ್‌ನ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಅಗ್ನಿ ಆಕಸ್ಮಿಕದಲ್ಲಿ 18 ಜನರು ಸಾವಿಗೀಡಾಗಿದ್ದರು.
ಐಸಿಯುಗಳ ಸ್ಥಿತಿಯನ್ನು ನೀವು ನೋಡಿದ್ದೀರಾ? ಸಣ್ಣ ಕೋಣೆಗಳಲ್ಲಿ ಏಳೆಂಟು ಹಾಸಿಗೆಗಳು ಇರುತ್ತವೆ. ನಾವು ತುರ್ತು ಸ್ಥಿತಿಯಲ್ಲಿದ್ದೇವೆ,ಹೀಗಾಗಿ ಐಸಿಯುಗಳ ಕುರಿತು ಯಾವುದೇ ಆದೇಶವನ್ನು ನಾವು ಹೊರಡಿಸುವುದಿಲ್ಲ. ಆದರೆ ನೀವು ಐಸಿಎಂಆರ್ ನಿಯಮಗಳನ್ನು ಪಾಲಿಸುವುದಾದರೆ ಶೇ.80ರಷ್ಟು ಐಸಿಯುಗಳನ್ನು ಮುಚ್ಚಬೇಕಾಗುತ್ತದೆ ಎಂದು ನ್ಯಾ.ಎಂ.ಆರ್.ಶಾ ಅವರು ಗುಜರಾತ ಸರಕಾರದ ವಕೀಲರನ್ನುದ್ದೇಶಿಸಿ ಹೇಳಿದರು.
ಈ ಘಟನೆಗಳ ಹೊರತಾಗಿಯೂ ಆಸ್ಪತ್ರೆಗಳಿಗಾಗಿ ಸುರಕ್ಷತಾ ನಿಯಮಗಳನ್ನು ಸಡಿಲಿಸಲು ಪ್ರಯತ್ನಿಸುತ್ತಿರುವುದಕ್ಕಾಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,‘ಅಗತ್ಯ ಪರವಾನಿಗೆಗಳು ಮತ್ತು ಸುರಕ್ಷತಾ ಕ್ರಮಗಳಿಲ್ಲದೆ 30 ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಆಸ್ಪತ್ರೆಗಳಿವೆ. ನಾವು ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಟ್ಟಡ ನಿರ್ಮಾಣಕಾರರಿಗೆ ನಿರಂತರವಾಗಿ ವಿನಾಯಿತಿಗಳನ್ನು ನೀಡುತ್ತಿದ್ದೇವೆ,ಈ ದೇಶದಲ್ಲಿ ನಾವು ಮಾಡುತ್ತಿರುವುದು ಇದಿಷ್ಟೇ ಆಗಿದೆ ’ಎಂದು ಕಿಡಿಕಾರಿತು.
ಸರಕಾರವು ಇಂತಹ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡುವಂತಿಲ್ಲ,ಹಾಗೆ ಮಾಡಿದರೆ ಅದು ಅತ್ಯಂತ ಅಸುರಕ್ಷಿತವಾಗುತ್ತದೆ ಎಂದು ಹೇಳಿದ ನ್ಯಾ.ಡಿ.ವೈ.ಚಂದ್ರಚೂಡ ಅವರು,‘ಐದು ಅಂತಸ್ತುಗಳ ಲಿಫ್ಟ್‌ಗಳಿಲ್ಲದ,ಸೂಕ್ತ ನಿರ್ಗಮನ ದ್ವಾರಗಳಿಲ್ಲದ ಕಟ್ಟಡಗಳನ್ನು ನೀವು ನರ್ಸಿಂಗ್ ಹೋಮ್‌ಗಳನ್ನಾಗಿ ಮಾಡುವಂತಿಲ್ಲ. ನಾವು ಇದೇ ಬಗೆಯ ಉದಾರತೆಯನ್ನು ತೋರಿಸುತ್ತಿದ್ದರೆ ಅಪಾಯಕಾರಿ ಕಟ್ಟಡಗಳ ಮುಂದುವರಿಕೆಗೆ ನಾವು ಅನುಮತಿ ನೀಡಿದಂತಾಗುತ್ತದೆ. ಹಾಗೆ ಮಾಡುವ ಮೂಲಕ ನಾವೂ ಒಳಸಂಚಿನಲ್ಲಿ ಭಾಗಿಯಾಗುತ್ತೇವೆ. ಭಾರತೀಯ ಸಮಾಜದಲ್ಲಿಯ ಎಲ್ಲ ರೋಗಗಳನ್ನು ನಾವು ಗುಣಪಡಿಸಲು ಸಾಧ್ಯವಿಲ್ಲ,ಆದರೆ ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯಲು ನ್ಯಾಯಾಧೀಶರಾಗಿ ನಾವು ಏನನ್ನು ಮಾಡಬಹುದೋ ಅದನ್ನು ನಾವು ಮಾಡಲೇಬೇಕು ’ಎಂದು ಹೇಳಿದರು.