×
Ad

ಸುಪ್ರೀಂ ಕೋರ್ಟ್ ಹೊರಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಸಾವು ಪ್ರಕರಣ: ನಿವೃತ್ತ ಐಪಿಎಸ್ ಅಧಿಕಾರಿ ಬಂಧನ

Update: 2021-08-27 19:04 IST
Twitter/@Amitabhthakur

ಲಕ್ನೋ: ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಸಂಕೀರ್ಣದ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ರಾಜಧಾನಿಯ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ಪೊಲೀಸರು ನಿವೃತ್ತ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕುರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಜೈಲಿನಲ್ಲಿರುವ ಬಿಎಸ್‍ಪಿ ಸಂಸದ ಅತುಲ್ ರಾಯ್ ವಿರುದ್ಧ ಮೇ 1, 2019ರಂದು ಮಹಿಳೆ ಅತ್ಯಾಚಾರ ಪ್ರಕರಣವನ್ನು ವಾರಣಾಸಿಯ ಲಂಕಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.  ಮಹಿಳೆ ಮತ್ತಾಕೆಯ ಸಂಗಾತಿಯೊಬ್ಬರು ಸುಪ್ರೀಂ ಕೋರ್ಟ್ ಮುಂದೆ ಆಗಸ್ಟ್ 16ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಲ್ಲದೆ ಎಸ್‍ಎಸ್‍ಪಿ ಅಮಿತ್ ಪಾಠಕ್, ನಿವೃತ್ತ ಐಜಿ ಅಮಿತಾಭ್ ಠಾಕುರ್ ಹಾಗೂ ಓರ್ವ ನ್ಯಾಯಾಧೀಶರು ತಮ್ಮ ವಿರುದ್ಧ ಸಂಚು ಹೂಡಿದ್ದರೆಂದು ಆರೋಪಿಸಿದ್ದರು.

ಘಟನೆಯ ಬೆನ್ನಲ್ಲೇ ವಾರಣಾಸಿಯ ಎಸ್‍ಎಸ್‍ಪಿ ಅಮಿತ್ ಪಾಠಕ್ ಅವರನ್ನು ವರ್ಗಾಯಿಸಲಾಗಿತ್ತು.

ಘೋಸಿ ಸಂಸದೀಯ ಕ್ಷೇತ್ರದಿಂದ ಬಿಎಸ್‍ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ರಾಯ್ ನಂತರ ಜೂನ್ 2019ರಲ್ಲಿ ಶರಣಾಗತರಾಗಿದ್ದರು. ಅವರ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಾಗಿಸಲಾಗಿತ್ತಲ್ಲದೆ ವಿಚಾರಣೆಯು ಪ್ರಯಾಗರಾಜ್‍ನ ಎಂಪಿ-ಎಂಎಲ್‍ಎ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ರಾಯ್ ಸೋದರ ಪವನ್ ಕುಮಾರ್ ನವೆಂಬರ್ 2020ರಂದು ವಾರಣಾಸಿಯ ಕೆಂಟೋನ್ಮೆಂಟ್ ಠಾಣೆಯಲ್ಲಿ ದೂರು ದಾಖಲಿಸಿ ಆಕೆ ತನ್ನ ಅತ್ಯಾಚಾರ ದೂರಿನ ಜತೆಗೆ ಲಗತ್ತಿಸಿದ್ದ ದಾಖಲೆಗಳಲ್ಲಿ ಒದಗಿಸಿದ್ದ ಜನನ ಪ್ರಮಾಣಪತ್ರದಲ್ಲಿ ಜನ್ಮ ದಿನಾಂಕವನ್ನು ತಿರುಚಿದ್ದಳೆಂದು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮಹಿಳೆ ಮತ್ತಾಕೆಯ ಸಂಗಾತಿ ವಿರುದ್ಧ ವಾರಣಾಸಿ ನ್ಯಾಯಾಲಯ ಕೆಲ ದಿನಗಳ ಹಿಂದೆ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News