“ಅವನು ಶಸ್ತ್ರಚಿಕಿತ್ಸೆಯಿಲ್ಲದೆ ಸತ್ತು ಹೋಗುತ್ತಾನೆ”: ಹಥರಾಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನ ಸೋದರನ ಅಳಲು

Update: 2021-08-27 14:37 GMT
ಅತಿಕುರ್ ರಹ್ಮಾನ್ [photo: thewire.in]

ಹೊಸದಿಲ್ಲಿ: ಉತ್ತರ ಪ್ರದೇಶದ ಹಥರಾಸ್ನಲ್ಲಿ ನಡೆದಿದ್ದ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಯನ್ನು ಮಾಡಲು ಅಲ್ಲಿಗೆ ತೆರಳುತ್ತಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರೊಂದಿಗೆ ಮಥುರಾದಲ್ಲಿ ಬಂಧಿಸಲ್ಪಟ್ಟಿದ್ದ ಅತಿಕುರ್ ರಹ್ಮಾನ್ (27) 2020, ಅ.5ರಿಂದಲೂ ಜೈಲಿನಲ್ಲಿದ್ದಾರೆ. ಹೃದ್ರೋಗದಿಂದ ಬಳಲುತ್ತಿರುವ ರಹ್ಮಾನ್ 2020 ನವಂಬರ್ನಲ್ಲಿ ಹೃದಯ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲಿದ್ದರು. ಅದಕ್ಕಾಗಿ ಅವರ ಕುಟುಂಬವು ಎರಡು ವರ್ಷಗಳಲ್ಲಿ ಕಷ್ಟಪಟ್ಟು ಎರಡು ಲಕ್ಷ ರೂ.ಗಳನ್ನು ಉಳಿಸಿತ್ತು. ಆದರೆ ಶಸ್ತ್ರಚಿಕಿತ್ಸೆಗೆ ಒಂದು ತಿಂಗಳ ಮೊದಲೇ ಅವರನ್ನು ಬಂಧಿಸಲಾಗಿತ್ತು. ಅವರ ಸ್ಥಿತಿ ಈಗ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಯದಿದ್ದರೆ ಅವರ ಜೀವಕ್ಕೇ ಅಪಾಯವಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಜೈಲು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ರಹ್ಮಾನ್ರ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಮಥುರಾ ನ್ಯಾಯಾಲಯದಲ್ಲಿ ಈವರೆಗೆ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಹ್ಮಾನ್ ಶಸ್ತ್ರಚಿಕಿತ್ಸೆಯಿಲ್ಲದೆ ಜೈಲಿನಲ್ಲಿ ಸಾಯಬಹುದು ಎಂದು ಅವರ ಕುಟುಂಬವು ಭೀತಿಗೊಳಗಾಗಿದೆ ಎಂದು thewire.in ವರದಿ ಮಾಡಿದೆ.

ರಹ್ಮಾನ್ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಆರೋಪಗಳನ್ನು ಹೊರಿಸಲಾಗಿದೆ.

“ನನ್ನ ಸೋದರನನ್ನು ಮತ್ತೊಮ್ಮೆ ಜೈಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಹೃದ್ರೋಗವನ್ನು ನಿರ್ಲಕ್ಷಿಸಲಾಗುತ್ತಿದೆ. ಆತ ಜೈಲಿನಲ್ಲಿಯೇ ಸಾಯುತ್ತಾನೆ ಎಂಬ ಭೀತಿ ನಮ್ಮನ್ನು ಕಾಡತೊಡಗಿದೆ’ ಎಂದು ರಹ್ಮಾನ್ರ ಹಿರಿಯ ಸೋದರ ಮತೀನ್ ಅಳಲು ತೋಡಿಕೊಂಡರು.

ಬಂಧನವಾದಾಗಿನಿಂದಲೂ ಅನಾರೋಗ್ಯದಿಂದ ರಹ್ಮಾನ್ ಹಲವಾರಿ ಬಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ, ಆದರೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿಲ್ಲ. ಅವರಿಗೆ ಅಗತ್ಯ ಚಿಕಿತ್ಸೆ ಮಥುರಾದಲ್ಲಿ ಲಭ್ಯವಿಲ್ಲ ಎಂದು ಅವರ ವಕೀಲ ಮಧುವನ ದತ್ತ ತಿಳಿಸಿದರು.

ರಹ್ಮಾನ್ ಅನಾರೋಗ್ಯಕ್ಕೆ ಕಾಲೋಚಿತ ಜ್ವರ ಕಾರಣವಾಗಿದೆ ಮತ್ತು ಇದೇ ಕಾರಣಕ್ಕೆ ಈಗಲೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಆದರೆ ರಹ್ಮಾನ್ ಅನಾರೋಗ್ಯಕ್ಕೆ ಅವರ ಹೃದ್ರೋಗ ಕಾರಣ ಎಂದು ಕುಟುಂಬವು ಪ್ರತಿಪಾದಿಸಿದೆ.

ಆ.24ರಂದು ರಹ್ಮಾನ್ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಮತ್ತು ಅವರನ್ನು ಜೈಲು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ದ ಮಾಧ್ಯಮ ಉಸ್ತುವಾರಿ ಮುಹಮ್ಮದ್ ಇಮ್ರಾನ್ ತಿಳಿಸಿದರು. ಸಿಎಫ್ಐನ ಮಾಜಿ ರಾಷ್ಟ್ರೀಯ ಖಜಾಂಚಿಯಾಗಿರುವ ರಹ್ಮಾನ್ ತನ್ನ ಬಂಧನದವರೆಗೂ ಸಂಘಟನೆಯ ಭಾಗವಾಗಿದ್ದರು.

ರಹ್ಮಾನ್ ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಇದೇ ಕಾರಣದಿಂದ ಪೊಲೀಸರು ಅದಾಗಲೇ ಅವರ ಮೇಲೆ ಕಣ್ಣಿಟ್ಟಿದ್ದರು ಎಂದೂ ಇಮ್ರಾನ್ ಆರೋಪಿಸಿದ್ದಾರೆ.

ರಹ್ಮಾನ್ರ ಬಂಧನವು ಅನ್ಯಾಯವಾಗಿದೆ, ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ ಸಿಎಫ್ಐನ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್.ಸಾಜಿದ್ ಅವರು, ಹೃದ್ರೋಗಿಯಾಗಿರುವ ಅವರಿಗೆ ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ಅವರ ಆರೋಗ್ಯ ದಿನೇದಿನೇ ಹದಗೆಡುತ್ತಿದೆ ಎಂದರು.

ದಿಲ್ಲಿಯ ಏಮ್ಸ್ನಲ್ಲಿ ಸುಧಾರಿತ ಚಿಕಿತ್ಸೆಯನ್ನು ಕೋರಿ ರಹ್ಮಾನ್ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪಕ್ಕೆ ಆಗ್ರಹಿಸಿರುವ ಸಿಎಫ್ಐ, ಅವರನ್ನು ತಕ್ಷಣ ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.

ಕಪ್ಪನ್, ರಹ್ಮಾನ್ ಜೊತೆ ಮಸೂದ್ ಅಹ್ಮದ್ ಮತ್ತು ಕಾರು ಚಾಲಕ ಆಲಂ ಕೂಡ ಬಂಧಿಸಲ್ಪಟ್ಟಿದ್ದರು. ಉತ್ತರ ಪ್ರದೇಶದ ಮುಝಫ್ಫರ್ನಗರ ಜಿಲ್ಲೆಯ ರಿಯಾವಾಲಿ ನಗ್ಲಾ ಗ್ರಾಮದ ನಿವಾಸಿಯಾಗಿರುವ ರಹ್ಮಾನ್ 2007ರಿಂದಲೂ ಹೃದಯ ತಜ್ಞರೊಂದಿಗೆ ಸಮಾಲೋಚಿಸಲು ಏಮ್ಸ್ಗೆ ಭೇಟಿ ನೀಡುತ್ತಿದ್ದರು. ಅವರಿಗೆ ಕೇವಲ ಎಂಟು ವರ್ಷವಾಗಿದ್ದಾಗ ಅವರಲ್ಲಿ ಹೃದ್ರೋಗವು ಪತ್ತೆಯಾಗಿತ್ತು.

ರಹ್ಮಾನ್ ಬಾಲ್ಯದಿಂದಲೇ ಔಷಧಿಗಳನ್ನು ಸೇವಿಸುತ್ತಿದ್ದ. ಆದರೆ 2020ರಲ್ಲಿ ವೈದ್ಯರು ಇನ್ನು ಔಷಧಿಗಳಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲೇಬೇಕು ಎಂದು ಖಡಾಖಂಡಿತವಾಗಿ ತಿಳಿಸಿದ್ದರು ಎಂದು ಮತೀನ್ ಹೇಳಿದರು. ರಹ್ಮಾನ್ ಈ ಹಿಂದೆ ಕನಿಷ್ಠ ಎರಡು ಬಾರಿ ಸೌಮ್ಯ ಹೃದಯಾಘಾತಕ್ಕೊಳಗಾಗಿದ್ದರು. ಬಂಧನಕ್ಕೆ ಕೆಲವೇ ತಿಂಗಳುಗಳ ಮುನ್ನ ಕೊನೆಯ ಬಾರಿ ಹೃದಯಾಘಾತವುಂಟಾಗಿತ್ತು. ವೈದ್ಯರು ತಿಳಿಸಿರುವಂತೆ ಅವರು ‘ಬೆಂಟಾಲ್ ಪ್ರಕ್ರಿಯೆ ’ಎಂದು ಕರೆಯಲಾಗುವ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಬೇಕಿದೆ ಮತ್ತು ಈ ಪ್ರಕ್ರಿಯೆಗೆ ಸುಮಾರು ಐದು ಗಂಟೆ ತಗಲುತ್ತದೆ.

ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಜಾಮೀನಿಗಾಗಿ 2021, ಜು.21ರಂದು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಆದರೆ ಒಂದು ತಿಂಗಳು ಕಳೆದರೂ ಅದನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ. ಶಸ್ತ್ರಚಿಕಿತ್ಸೆಗೆ ಹಣವನ್ನು ಒಟ್ಟುಗೂಡಿಸಲು ರಹ್ಮಾನ್ ಪಟ್ಟಿದ್ದ ಕಷ್ಟ ಸೇರಿದಂತೆ ಅವರ ಹತಾಶ ಸ್ಥಿತಿಯನ್ನು ಇಂಚಿಂಚಾಗಿ ವಿವರಿಸಿರುವ ಅರ್ಜಿಯು, ಮಥುರಾ ಜೈಲು ಆಡಳಿತವು ಅವರಿಗೆ ಸೂಕ್ತ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದೆ.

ಮತೀನ್ ‘ಅತಿಕುರ್ ರಹ್ಮಾನ್, ರೂಪುಗೊಳ್ಳುತ್ತಿರುವ ಇನ್ನೋರ್ವ ಸ್ಟಾನ್ ಸ್ವಾಮಿ! ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಜಾಮೀನು ಸೌಲಭ್ಯ ಕಲ್ಪಿಸಿ ’ಎಂಬ ಶೀರ್ಷಿಕೆಯೊಂದಿಗೆ ಆನ್ಲೈನ್ ಅರ್ಜಿ ಅಭಿಯಾನವನ್ನು ಆರಂಭಿಸಿದ್ದಾರೆ.

‘ನಮ್ಮ ಕುಟುಂಬವು ಜೀವನಕ್ಕಾಗಿ ಕಬ್ಬು ಕೃಷಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದೆ, ರಹ್ಮಾನ್ ಮಾತ್ರ ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದ. ಬಡತನದ ಹಿನ್ನೆಲೆಯಿಂದ ಬಂದಿದ್ದರೂ ಆತ ಮೀರತ್ನ ಚೌಧರಿ ಚರಣಸಿಂಗ್ ವಿವಿಯಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ಮತ್ತು ಶೀಘ್ರವೇ ಇನ್ನೊಂದು ಪರೀಕ್ಷೆಯನ್ನು ಬರೆಯಲಿದ್ದ ’ ಎಂದ ಮತೀನ್, ‘ನಾವು ಎಲ್ಲಿ ಆತನನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಭಯ ನಮಗುಂಟಾಗಿದೆ ಎಂದು ಹೇಳಿದರು.

ರಹ್ಮಾನ್ಗೆ ಹಾರಿಸ್ (5) ಮತ್ತು ವಾರಿಸ್(4) ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಪತಿ ಜೈಲು ಸೇರಿದಾಗಿನಿಂದಲೂ ರಹ್ಮಾನ್ ಪತ್ನಿ ಸಂಜೀದಾ ಬೇಗಂ ಆರೋಗ್ಯ ಹದಗೆಡುತ್ತಲೇ ಇದೆ. ಇತ್ತೀಚಿಗೆ ಅವರಲ್ಲಿಯೂ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ‘ತಮ್ಮ ತಂದೆ ಜೈಲಿನಲ್ಲಿದ್ದಾರೆ ಎನ್ನುವುದು ನನ್ನ ಮಕ್ಕಳಿಗೆ ಗೊತ್ತಿಲ್ಲ. ಅವರು ಅಲ್ಲಿಯೇ ಕೊನೆಯುಸಿರೆಳೆದರೆ ನಾನು ಮಕ್ಕಳಿಗೆ ಏನು ಹೇಳಲಿ ’ಎಂಬ ಸಂಜೀದಾ ಬೇಗಂ ಪ್ರಶ್ನಿಸಿದರು ಎಂದು thewire.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News