×
Ad

ಭೀಮಾಕೋರೆಗಾಂವ್ ಪ್ರಕರಣ: ಜೈಲು ಅಧಿಕಾರಿಗಳಿಂದ ಬಂಧಿತರು ಬಂಧುಗಳು, ವಕೀಲರಿಗೆ ಬರೆದ ಪತ್ರಗಳ ನಕಲು; ವರದಿ

Update: 2021-08-27 23:02 IST

ಭೋಪಾಲ್, ಆ.27: ತಮ್ಮನ್ನು ಬಂಧನದಲ್ಲಿರಿಸಲಾಗಿದ್ದ ಮುಂಬೈಯ ತಲೋಜಾ ಜೈಲಿನಲ್ಲಿ ಅಧಿಕಾರಿಯೊಬ್ಬರು, ತಾವು ತಮ್ಮ ಕುಟುಂಬಿಕರು ಹಾಗೂ ವಕೀಲರಿಗೆ ಬರೆದ ಪತ್ರಗಳನ್ನು ಸ್ಕಾನ್ ಮಾಡುತ್ತಿದ್ದರು ಹಾಗೂ ಅವುಗಳ ಪ್ರತಿಗಳನ್ನು ಇಟ್ಟುಕೊಳ್ಳುತ್ತಿದ್ದರೆಂದು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಹತ್ತು ಮಂದಿ ಮಾನವಹಕ್ಕು ಹೋರಾಟಗಾರರು ಆರೋಪಿಸಿದ್ದಾರೆಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಇದೊಂದು ಆಕ್ರಮ ರಾಜಕೀಯ ಸೆನ್ಸಾರ್‌ಶಿಪ್ ಆಗಿದೆಯೆಂದು ಆರೋಪಿಸಿ ಬಂಧಿತ ಮಾನವಹಕ್ಕುಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ, ಅರುಣ್ ಫೆರೇರಾ, ಗೌತಮ್ ನವ್ಲಾಖಾ, ವೆರ್ನೊಮ್ ಗೊನ್ಸಾಲ್ವಿಸ್, ಸುಧೀರ್ ಧಾವಳೆ, ಮಹೇಶ್ ರಾವತ್, ರೋನಾ ವಿಲ್ಸನ್, ಸಾಗರ್ ಗೋರ್ಖೆ, ಸುರೇಂದ್ರ ಗಾಡ್ಲಿಂಗ್ ಹಾಗೂ ರಮೇಶ್ ಗೈಚೋರ್ ಅವರು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಪತ್ರಬರೆದಿದ್ದಾರೆ.

2018ರಲ್ಲಿ ಪುಣೆ ಸಮೀಪದ ಭೀಮಾಕೋರೆಗಾಂವ್ ಗ್ರಾಮದ ಬಳಿಕ ಜಾತಿ ಹಿಂಸಾಚಾರ ನಡೆಸಲು ಸಂಚುಹೂಡಿದ್ದಾರೆಂಬ ಆರೋಪದಲ್ಲಿ 16 ಮಂದಿಯನ್ನು ಮಹಾರಾಷ್ಟ್ಕ ಪೊಲೀಸರು ಬಂಧಿಸಿದ್ದರು. ಅವರಲ್ಲಿ 14 ಮಂದಿಯನ್ನು ಮಹಾರಾಷ್ಟ್ರದ ಜೈಲಿನಲ್ಲಿ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧನದಲ್ಲಿರಿಸಲಾಗಿದೆ.

ಆರೋಪಿಗಳಲ್ಲೊಬ್ಬನಾದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್‌ಸ್ವಾಮಿ ತೀವ್ರ ಅನಾರೋಗ್ಯದ ಹೊರತಾಗಿಯೂ ಜಾಮೀನು ಬಿಡುಗಡೆ ನಿರಾಕರಿಸಲಾಗಿತ್ತು. ಅವರು ಈ ವರ್ಷದ ಜುಲೈನಲ್ಲಿ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿದ್ದರು. 81 ವರ್ಷ ವಯಸ್ಸಿನ ಇನ್ನೋರ್ವ ತೆಲುಗು ಕವಿ ವರವರರಾವ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಈ ವರ್ಷದ ಫೆಬ್ರವರಿಯಲ್ಲಿ ಜಾಮೀನು ನೀಡಲಾಗಿತ್ತು.

ತಾವು ಬರೆದಿದ್ದ ಕೆಲವು ಪತ್ರಗಳನ್ನು ಪ್ರಾಸಿಕ್ಯೂಶನ್ ಜೊತೆ ಪೊಲೀಸರು ಹಂಚಿಕೊಂಡಿದ್ದಾರೆಂದು ತಾವು ಭಾವಿಸಿರುವುದಾಗಿ ಈ ಹತ್ತು ಮಂದಿ ಸಾಮಾಜಿಕ ಕಾರ್ಯಕರ್ತರು ಮಹಾರಾಷ್ಟ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ತಾವು ಬರೆದಿರುವ ಪತ್ರಗಳು ಅವುಗಳ ಗಮ್ಯಸ್ಥಾನವನ್ನು ತಲುಪಲು ಅನಗತ್ಯ ವಿಳಂಬವಾಗುತ್ತಿದೆಯೆಂದು ಅವರು ಹೇಳಿದ್ದಾರೆ.

ಜೈಲಿನಲ್ಲಿ ಬರೆದ ಬರಹಗಳಿಗಾಗಿ ತೇಲ್ತುಂಬ್ಡೆ, ಗೈಚೊರ್ ಹಾಗೂ ಫೆರೇರಾ ಅವರಿಗೆ ತಲೋಜಾ ಜೈಲಿನ ಪೊಲೀಸ್ ಅಧೀಕ್ಷಕ ಕೌಸ್ತುಭ್ ಕುರ್ಲೇಕರ್ ನೋಟಿಸ್ ಜಾರಿಗೊಳಿಸಿದ್ದಾರೆಂದು ಅವರು ತಿಳಿಸಿದರು.

ಎರಡು ಲೇಖನಗಳಿಗಾಗಿ ಡಾ.ಆನಂದ್‌ಗೆ ಹಾಗೂ ಅಂಬೇಡ್ಕರ್‌ವಾದಿ ಮತ್ತು ಸಾಂಸ್ಕೃತಿಕ ಹೋರಾಟಗಾರ ವೀರ ಸಾಥಿದಾರ್‌ಗೆ ಶ್ರದ್ಧಾಂಜಲಿಯಾಗಿ ಕವನವನ್ನು ಬರೆದ ಗೈಚೊರ್‌ಗೆ ಕುರ್ಲೇಕರ್ ನೋಟಿಸ್ ಜಾರಿಗೊಳಿಸಿದ್ದರೆಂದು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News