ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿರುವ ವಾಟ್ಸ್‌ಆ್ಯಪ್: ಅರ್ಜಿಗೆ ಉತ್ತರಿಸಿ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್

Update: 2021-08-27 18:00 GMT

ಹೊಸದಿಲ್ಲಿ,ಆ.27: ನೂತನ ಐಟಿ ನಿಯಮಾವಳಿಗಳಲ್ಲಿಯ ನಿಯಮವೊಂದನ್ನು ಪ್ರಶ್ನಿಸಿ ವಾಟ್ಸ್‌ಆ್ಯಪ್ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.

 ಅಧಿಕಾರಿಗಳು ಕೇಳಿದಾಗ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಮಾಹಿತಿಯ ಮೊದಲ ಮೂಲವನ್ನು ಗುರುತಿಸುವುದನ್ನು ಅಗತ್ಯವಾಗಿಸಿರುವ ಐಟಿ ನಿಯಮಾವಳಿಗಳಲ್ಲಿಯ ನಿಯಮ 4(2) ಅನ್ನು ವಾಟ್ಸ್‌ಆ್ಯಪ್ ಪ್ರಶ್ನಿಸಿದೆ. ಈ ನಿಯಮವು ಅಸಾಂವಿಧಾನಿಕವಾಗಿದೆ ಮತ್ತು ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಅದು ವಾದಿಸಿದೆ.

ವಿಚಾರಣೆ ಸಂದರ್ಭ ಕೇಂದ್ರವು ವಿಷಯವನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿಕೊಂಡಿತು. ಆದರೆ ವಾಟ್ಸ್‌ಆ್ಯಪ್ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು,ಮೊದಲ ಬಾರಿ ಪ್ರಕರಣದ ವಿಚಾರಣೆ ನಡೆದಾಗ ಸರಕಾರದ ಪರ ವಕೀಲರು ಸೂಚನೆಗಳನ್ನು ಪಡೆದುಕೊಳ್ಳಲು ಕಾಲಾವಕಾಶ ಕೋರಿದ್ದರಿಂದ ನ್ಯಾಯಾಲಯವು ಕೇಂದ್ರಕ್ಕೆ ನೋಟಿಸ್ ಹೊರಡಿಸಿರಲಿಲ್ಲ. ಇಂದು ಮತ್ತೆ ಅವರು ಮುಂದೂಡುವಿಕೆಯನ್ನು ಕೋರಿದ್ದಾರೆ. ಕನಿಷ್ಠ ನೋಟಿಸನ್ನಾದರೂ ಹೊರಡಿಸಿ,ಅವರು ಉತ್ತರವನ್ನು ಸಲ್ಲಿಸಲಿ.ಇದು ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಎತ್ತಲಾಗಿರುವ ಅತ್ಯಂತ ಗಂಭೀರ ಪ್ರಶ್ನೆಯಾಗಿದೆ ಎಂದು ಹೇಳಿದರು.

ತಾನು ಮಧ್ಯಂತರ ಆದೇಶಕ್ಕಾಗಿ ಕೋರುತ್ತಿಲ್ಲ ಎಂದು ರೋಹಟ್ಗಿ ಹೇಳಿದ ಬಳಿಕ ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿದ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಅ.22ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News