ದಿಲ್ಲಿ ಗಲಭೆ ತನಿಖೆಯ ಗುಣಮಟ್ಟ ತುಂಬಾ ಕಳಪೆಯಾಗಿದೆ: ನ್ಯಾಯಾಲಯ

Update: 2021-08-29 18:16 GMT

ಹೊಸದಿಲ್ಲಿ, ಅ. 29: 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ದೊಡ್ಡ ಸಂಖ್ಯೆಯ ಗಲಭೆ ಪ್ರಕರಣಗಳ ತನಿಖೆಯ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ದಿಲ್ಲಿ ನ್ಯಾಯಾಲಯ ಹೇಳಿದೆ. ಅಲ್ಲದೆ, ದಿಲ್ಲಿ ಪೊಲೀಸ್ ಆಯುಕ್ತರು ಈ ಪ್ರಕರಣಗಳ ತನಿಖೆಯ ಮಧ್ಯೆ ಪ್ರವೇಶಿಸುವಂತೆ ಸೂಚಿಸಿದೆ.

2020 ಫೆಬ್ರವರಿ 25ರಂದು ನಡೆದ ಕೋಮು ಹಿಂಸಾಚಾರದ ಸಂದರ್ಭ ಪೊಲೀಸ್ ಅಧಿಕಾರಿಯ ಮೇಲೆ ಆ್ಯಸಿಡ್, ಬಾಟಲಿ ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿದ ಆರೋಪಿಗಳಲ್ಲಿ ಓರ್ವನ ವಿರುದ್ಧ ಆರೋಪವನ್ನು ರೂಪಿಸುವ ಸಂದರ್ಭ ಹೆಚ್ಚುವರಿ ಸತ್ರ ನ್ಯಾಯಾಧೀಶ ವಿನೋದ್ ಯಾದವ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ದೊಡ್ಡ ಸಂಖ್ಯೆಯ ಗಲಭೆ ಪ್ರಕರಣಗಳಲ್ಲಿ ತನಿಖೆ ಗುಣಮಟ್ಟ ಕಳಪೆಯಾಗಿರುವುದನ್ನು ಉಲ್ಲೇಖಿಸಲು ಬೇಸರವಾಗುತ್ತಿದೆ ಎಂದು ಹೇಳಿದ ಹೆಚ್ಚುವರಿ ಸತ್ರ ನ್ಯಾಯಾಧೀಶರು, ಹೆಚ್ಚಿನ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದರು.

ಅರೆ ಬೆಂದ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತರುವ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅನೇಕ ಪ್ರಕರಣಗಳಲ್ಲಿ ಹೆಸರಿಸಲಾದ ಆರೋಪಿಗಳು ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News