ವಿಶಾಖಪಟ್ಟಣಂ ಉಕ್ಕು ಸ್ಥಾವರ ಖಾಸಗೀಕರಣ ಖಂಡಿಸಿ 10 ಕಿ. ಮೀ. ಮಾನವ ಸರಪಳಿ

Update: 2021-08-29 18:24 GMT

ವಿಶಾಖಪಟ್ಟಣಂ, ಅ. 29: ವಿಶಾಖಪಟ್ಟಣಂ ಉಕ್ಕು ಸ್ಥಾವರ (ವಿಸಾಗ್ ಸ್ಟೀಲ್)ದ ಖಾಸಗೀಕರಣದ ವಿರುದ್ಧದ ಹೋರಾಟವನ್ನು ವಿಶಾಖ ಉಕ್ಕು ಪರಿರಕ್ಷಣಾ ಪೋರಾಟ ಸಮಿತಿ ತೀವ್ರಗೊಳಿಸಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಉಕ್ಕು ಸ್ಥಾವರದ ಕಾರ್ಮಿಕರು, ರಾಜಕೀಯ ಪಕ್ಷಗಳ ಹೋರಾಟಗಾರರು, ವಿಶಾಖಪಟ್ಟಣಂ ಉಕ್ಕು ಸ್ಥಾವರದಿಂದ ಭೂಮಿ ಕಳೆದುಕೊಂಡವರು ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಅವರೆಲ್ಲರ ಕುಟುಂಬದ ಸದಸ್ಯರು ರವಿವಾರ ವಿಶಾಖಪಟ್ಟಣಂನ ಅಗನಂಪುಡಿಯಿಂದ ಅಕ್ಕಿರೆಡ್ಡಿಪಾಳ್ಯಂ ವರೆಗೆ ಸುಮಾರು 10 ಕಿ.ಮೀ. ಉದ್ದದ ಮಾನವ ಸರಪಳಿ ‘ಮಹಾ ಮಾನವ ಹಾರಂ’ ರಚಿಸಿದರು.

ವಿಶಾಖಪಟ್ಟಣಂ ಉಕ್ಕು ಸ್ಥಾವರ (ವಿಝಾಗ್ ಸ್ಟೀಲ್)ದ ಮಾಲಕ ಸಂಸ್ಥೆ ರಾಷ್ಟ್ರೀಯ ಇಸ್ಪಾಟ್ ನಿಗಮ್ ಲಿಮಿಟೆಡ್ ಶೇ. 100 ವ್ಯೆಹಾತ್ಮಕ ಹೂಡಿಕೆ ಹಿಂದೆಗೆತಕ್ಕೆ ಡಿಐಡಿಎಎಂ (ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿವರ್ಹಣೆ ಇಲಾಖೆ) ಅನುಮೋದನೆ ನೀಡಿದ ಬಳಿಕ ಆರಂಭಿಸಲಾದ ಪ್ರತಿಭಟನೆ 200 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಮಾನವ ಸರಪಳಿ ಏರ್ಪಡಿಸಲಾಗಿತ್ತು.

ನಿಗದಿತ ಸಮಯಕ್ಕಿಂತ ಮೊದಲೇ ಆರಂಭವಾದ 10 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಕೈಜೋಡಿಸಿದ ಪ್ರತಿಭಟನಕಾರರು ಉಕ್ಕು ಸ್ಥಾವರದ ಖಾಸಗೀಕರಣ ಹಾಗೂ ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿಯ ಹಿನ್ನೆಲೆಯಲ್ಲಿ ಪೊಲೀಸರು ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದರು.

ಮಾನವ ಸರಪಳಿಯಲ್ಲಿ ಟಿಡಿಪಿ, ವೈಎಸ್ಆರ್ಸಿ, ಜನ ಸೇನಾ, ಎಡ ಪಕ್ಷಗಳು ಹಾಗೂ ಕಾರ್ಮಿಕ ಒಕ್ಕೂಟಗಳ ನಾಯಕರು ಪಾಲ್ಗೊಂಡಿದ್ದರು. ಕೇಂದ್ರದ ಬಿಜೆಪಿ ಸರಕಾರ ಉಕ್ಕು ಸ್ಥಾವರವನ್ನು ಖಾಸಗೀಕರಣಗೊಳಿಸಿರುವುದನ್ನು ಖಂಡಿಸಿದರು. ಉಕ್ಕು ಸ್ಥಾವರದ ರಕ್ಷಣೆಗೆ ಸಂಘಟಿತ ಹೋರಾಟ ನಡೆಸುವುದಾಗಿ ಅವರು ಘೋಷಿಸಿದರು.

ಉಕ್ಕು ಸ್ಥಾವರವನ್ನು ರಕ್ಷಿಸಲು ರಾಜ್ಯದ ಎಲ್ಲ ಸಂಸದರು ಶ್ರಮಿಸಲಿದ್ದೇವೆ ಎಂದು ಅನಕಪಲ್ಲೆಯ ಸಂಸದೆ ಸತ್ಯವತಿ ಅವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News