ಮೊದಲ ಮಹಿಳಾ ಸಿಜೆಐಗೆ ಅಲ್ಪ ಅಧಿಕಾರಾವಧಿ!

Update: 2021-08-30 06:24 GMT
ಬಿ.ವಿ.ನಾಗರತ್ನ

ಹೊಸದಿಲ್ಲಿ : ಸುಪ್ರೀಂಕೋರ್ಟ್‌ನ ನೂತನ ನ್ಯಾಯಮೂರ್ತಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ದೇಶದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಿದ್ದಾರೆ. ಆದರೆ ಸಿಜೆಐ ಆಗಿ ಅವರ ಅಧಿಕಾರಾವಧಿ ಕೇವಲ 36 ದಿನಗಳ ಕಾಲ ಮಾತ್ರ ಇರುತ್ತದೆ.

2027ರಲ್ಲಿ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

2027ರ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 29ರವರೆಗೆ ಸಿಜೆಐ ಆಗಲಿರುವ ಅವರು 77 ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಮೂರನೇ ಅತ್ಯಲ್ಪ ಅವಧಿಯ ಸಿಜೆಐ ಎನಿಸಿಕೊಳ್ಳಲಿದ್ದಾರೆ. ಇಂದು ಅಧಿಕಾರ ಸ್ವೀಕರಿಸಲಿರುವ ಒಂಬತ್ತು ಮಂದಿ ನ್ಯಾಯಮೂರ್ತಿಗಳ ಪೈಕಿ ಇತರ ಇಬ್ಬರು ಕೂಡಾ ಭಾರತದ ನ್ಯಾಯಾಂಗದ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ.

ನ್ಯಾಯಮೂರ್ತಿ ವಿಕ್ರಮ್‌ನಾಥ್ ಅವರು 2027ರ ಫೆಬ್ರುವರಿ 2ರಿಂದ ಸೆಪ್ಟೆಂಬರ್ 27ರವರೆಗೆ ಅಂದರೆ ಏಳು ತಿಂಗಳು 21 ದಿನಗಳ ಕಾಲ ಅತ್ಯುನ್ನತ ಹುದ್ದೆಯಲ್ಲಿ ಇರಲಿದ್ದಾರೆ. ನ್ಯಾಯಮೂರ್ತಿ ನಾಗರತ್ನ ಅವರ ಬಳಿಕ ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರು ಭಾರತದ ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿ ಆರು ತಿಂಗಳು ನಾಲ್ಕು ದಿನಗಳ ಕಾಲ ಇರಲಿದ್ದಾರೆ. ಇವರ ಅಧಿಕಾರಾವಧಿ 2027ರ ಅಕ್ಟೋಬರ್ 30ರಿಂದ 2028ರ ಮೇ 3ರವರೆಗೆ ಇರಲಿದೆ.

ಭಾರತದ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ನ್ಯಾಯಮೂರ್ತಿ ಕಮಲ್ ನಾರಾಯಣ್ ಅತ್ಯಲ್ಪ ಅವಧಿಗೆ ಅಂದರೆ 1991ರ ನವೆಂಬರ್ 25ರಿಂದ ಡಿಸೆಂಬರ್ 13ರವರೆಗೆ ಕೇವಲ 18 ದಿನಗಳಿಗೆ ಸಿಜೆಐ ಆಗಿದ್ದರು. ಅದಾದ ಬಳಿಕ ನ್ಯಾಯಮೂರ್ತಿ ಎಸ್.ರಜೇಂದ್ರಬಾಬು ಎರಡನೇ ಅತ್ಯಲ್ಪ ಅವಧಿಯಲ್ಲಿ ಅಂದರೆ 2004ರ ಮೇ 2 ರಿಂದ 31ರವರೆಗೆ 30 ದಿನಗಳ ಕಾಲ ಸಿಜೆಐ ಆಗಿದ್ದರು. ಈ ಪೈಕಿ ಅರ್ಧ ಅಧಿಕಾರಾವಧಿ ಬೇಸಿಗೆ ರಜೆಯಲ್ಲಿ ಕಳೆದಿತ್ತು. ನ್ಯಾಯಮೂರ್ತಿ ಜೆ.ಸಿ.ಶಾ 1970ರ ಡಿಸೆಂಬರ್ 17ರಿಂದ 1971ರ ಜನವರಿ 21ರವೆಗೆ ಅಂದರೆ 36 ದಿನಗಳ ಕಾಲ ಸಿಜೆಐ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News