ಮಧ್ಯ ಪ್ರದೇಶ: ಆದಿವಾಸಿ ವ್ಯಕ್ತಿಯನ್ನು ಹಿಂಸಿಸಿ ಕೊಂದ ಆರೋಪಿಗಳ ಅಕ್ರಮ ಮನೆಗಳು ನೆಲಸಮ

Update: 2021-08-30 08:28 GMT
Photo: Twitter

ಭೋಪಾಲ್: ನಲ್ವತ್ತೈದು ವರ್ಷದ ಆದಿವಾಸಿ ವ್ಯಕ್ತಿಯೊಬ್ಬನನ್ನು ಹಿಂಸಿಸಿ ಸಾಯಿಸಿದ ಆರೋಪ ಹೊತ್ತ ಮೂವರು ವ್ಯಕ್ತಿಗಳ ಅಕ್ರಮವಾಗಿ ನಿರ್ಮಿತ ಮನೆಗಳನ್ನು ಸ್ಥಳೀಯಾಡಳಿತ ರವಿವಾರ ನೆಲಸಮಗೊಳಿಸಿದೆ.

ನೀಮಚ್ ಜಿಲ್ಲೆಯ ಬನಾಡ ಗ್ರಾಮದ ನಿವಾಸಿ ಕನ್ನಯ್ಯಲಾಲ್ ಭೀಲ್ ಎಂಬಾತನನ್ನು ಕಳೆದ ಗುರುವಾರ ಜೆಟಿಯಾ ಗ್ರಾಮದಲ್ಲಿ ಟ್ರಕ್ ಒಂದಕ್ಕೆ ಕಟ್ಟಿ ಹಾಕಿ ಎಳೆದೊಯ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆತ ಮರುದಿನ ಮೃತಪಟ್ಟಿದ್ದ.  ಒಂದು ಸಣ್ಣ ಅಪಘಾತ ನಡೆದ ನಂತರ ಈ ಘಟನೆ ನಡೆದಿತ್ತು.

ರವಿವಾರ ನೆಲಸಮಗೊಳಿಸಲಾದ ಮೂರು ಮನೆಗಳ ಪೈಕಿ ಒಂದು  ಮನೆ ಗ್ರಾಮ ಸರಪಂಚೆಯ ಪತಿಯದ್ದಾಗಿತ್ತು ಹಾಗೂ ಆತನನ್ನು ಈಗಾಗಲೇ ಬಂಧಿಸಲಾಗಿದೆ. ನೆಲಸಮಗೊಂಡ ಇತರ ಮನೆಗಳು ಪಟಾನ್ ಗ್ರಾಮದಲ್ಲಿದ್ದವು ಹಾಗೂ ಅವುಗಳು ಅಮರ್ ಚಂಗ್ ಹಾಗೂ ಸತ್ಯನಾರಾಯಣ್ ಎಂಬವರದ್ದಾಗಿತ್ತು.

ಜಿಲ್ಲಾಡಳಿತದ ಅಧಿಕಾರಿಗಳು ರವಿವಾರ ಬಂಡ ಗ್ರಾಮದಲ್ಲಿರುವ ಸಂತ್ರಸ್ತನ ಮನೆಗೆ ಭೇಟಿ ನೀಡಿ  ರೂ 4 ಲಕ್ಷ ಪರಿಹಾರವೊದಗಿಸುವ ಭರವಸೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಗುರುತಿಸಲಾಗಿದ್ದು ಅವರ ಪೈಕಿ ಐವರನ್ನು ಬಂಧಿಸಲಾಗಿದೆ. ತ್ವರಿತ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದು ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ಕುಮಾರ್ ವರ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News