ತಾಲಿಬಾನ್ ಗೆ ಎಲ್ಲಾ ದೇಶಗಳೂ ಸಕ್ರಿಯ ಮಾರ್ಗದರ್ಶನ ನೀಡಬೇಕು: ಚೀನಾ ಆಗ್ರಹ

Update: 2021-08-30 16:15 GMT

ಬೀಜಿಂಗ್, ಆ.30: ಅಫ್ಘಾನ್ ನಿಂದ ಅಮೆರಿಕದ ಸೇನಾಪಡೆಯ ವಾಪಸಾತಿಯಿಂದ ಆ ದೇಶದಲ್ಲಿ ಭಯೋತ್ಪಾದಕ ಗುಂಪುಗಳ ಪುನರುಜ್ಜೀವನಕ್ಕೆ ಅವಕಾಶ ಸಿಗಬಹುದು. ಈಗ ಅಫ್ಘಾನ್ ನ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳಾಗಿದ್ದು ಎಲ್ಲಾ ದೇಶಗಳೂ ತಾಲಿಬಾನ್ ನೊಂದಿಗೆ ಸಂಪರ್ಕ ಸಾಧಿಸಿ ಸಕ್ರಿಯ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಚೀನಾ ಹೇಳಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ರವಿವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಂದರ್ಭ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅಫ್ಘಾನ್ ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನ್ಹುವಾ ವರದಿ ಮಾಡಿದೆ.

ಅಫ್ಘಾನಿಸ್ತಾನಕ್ಕೆ ತುರ್ತು ಅಗತ್ಯವಿರುವ ಆರ್ಥಿಕ, ಜೀವನಾಧಾರ ಹಾಗೂ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ, ಅಲ್ಲಿನ ನೂತನ ರಾಜಕೀಯ ವ್ಯವಸ್ಥೆ ಕ್ರಮಬದ್ಧವಾಗಿ ಆಡಳಿತ ನಡೆಸಲು, ಸಾಮಾಜಿಕ ಭದ್ರತೆ ಮತ್ತು ಸ್ಥಿರತೆ ಕಾಯ್ದುಕೊಳ್ಳಲು, ಕರೆನ್ಸಿಯ ಅಪವೌಲ್ಯ ಮತ್ತು ಹಣದುಬ್ಬರ ತಡೆಯಲು ಹಾಗೂ ಅಫ್ಘಾನ್ ನ ಮರುರಚನಾ ಪ್ರಕ್ರಿಯೆ ಶಾಂತರೀತಿಯಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಅಮೆರಿಕವು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ವಾಂಗ್ ಹೇಳಿದರು.

 ಅಫ್ಘಾನ್ ನಲ್ಲಿ ಉಗ್ರರ ಸಂಘಟನೆಗಳನ್ನು ನಾಶಗೊಳಿಸುವ ಗುರಿಯನ್ನು ಯುದ್ಧದಿಂದ ಸಾಧಿಸಲಾಗಲಿಲ್ಲ ಎಂಬುದನ್ನು ವಾಸ್ತವಾಂಶಗಳು ಮತ್ತೊಮ್ಮೆ ಸಾಬೀತುಪಡಿಸಿವೆ ಮತ್ತು ಅಲ್ಲಿಂದ ಅಮೆರಿಕ ಮತ್ತು ನೇಟೊ ಪಡೆಗಳ ವಾಪಸಾತಿಯ ಅವಸರದ ಉಪಕ್ರಮವು ಆ ದೇಶದಲ್ಲಿ ವಿವಿಧ ಉಗ್ರ ಸಂಘಟನೆಗಳು ಮತ್ತೆ ಸಂಘಟಿತವಾಗಲು ಅವಕಾಶ ನೀಡಿದೆ. ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವುದರೊಂದಿಗೆ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ನಿಗ್ರಹಿಸಲು ಅಫ್ಘಾನ್ ಗೆ ನೆರವಾಗುವ ನಿಟ್ಟಿನಲ್ಲಿ ಅಮೆರಿಕ ಸಶಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಾಂಗ್ ಆಗ್ರಹಿಸಿದರು.

 ತಿಕ್ಕಾಟಕ್ಕಿಂತ ಮಾತುಕತೆ ಉತ್ತಮ ಮತ್ತು ಸಂಘರ್ಷಕ್ಕಿಂತ ಸಹಕಾರ ಉತ್ತಮ ಎಂಬ ನಿಲುವು ಚೀನಾದ್ದಾಗಿದೆ. ಅಮೆರಿಕವು ಚೀನಾದ ಬಗ್ಗೆ ತಳೆಯುವ ಧೋರಣೆಯನ್ನು ಆಧರಿಸಿ ಆ ದೇಶದೊಂದಿಗೆ ಚೀನಾದ ಸ್ನೇಹಸಂಬಂಧ ರೂಪುಗೊಳ್ಳಲಿದೆ. ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಹಳಿಗೆ ತರಲು ಅಮೆರಿಕ ಬಯಸುವುದಾದರೆ ಅವರು ಚೀನಾದ ವಿರುದ್ಧ ಕಣ್ಣುಮುಚ್ಚಿ ಮಾಡುತ್ತಿರುವ ಅಪಪ್ರಚಾರ ಮತ್ತು ದಾಳಿಯನ್ನು ಮೊದಲು ನಿಲ್ಲಿಸಬೇಕು, ಅಲ್ಲದೆ ಚೀನಾದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಯನ್ನು ಕೀಳಂದಾಜಿಸುವುದನ್ನು ನಿಲ್ಲಿಸಬೇಕು ಎಂದು ವಾಂಗ್ ಇದೇ ಸಂದರ್ಭ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಚೀನಾ, ರಶ್ಯಾ ಮತ್ತು ಪಾಕಿಸ್ತಾನಗಳು ಕಾಬೂಲ್ನಲ್ಲಿನ ತಮ್ಮ ರಾಯಭಾರಿ ಕಚೇರಿಯನ್ನು ಮುಚ್ಚಿಲ್ಲ. ಇತ್ತೀಚೆಗಷ್ಟೇ ಅಫ್ಘಾನ್ ಗೆ ಚೀನಾದ ರಾಯಭಾರಿ ವಾಂಗ್ ಯು ತಾಲಿಬಾನ್ ಅಧಿಕಾರಿಗಳೊಂದಿಗೆ ಪ್ರಥಮ ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News