×
Ad

ಪೊಲೀಸರಿಂದ ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ: ಜಾರ್ಖಂಡ್ ಯುವಕರ ಆರೋಪ

Update: 2021-09-01 22:52 IST

ರಾಂಚಿ, ಸೆ. 1: ಕಳೆದ ವಾರ ವಿಚಾರಣೆಗೆ ಹಾಜರಾಗಿದ್ದ ತಮ್ಮ ಮೇಲೆ ಜಾರ್ಖಂಡ್ನ ಜೆಮ್ಶದ್‌ ಪುರ ನಗರದ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಇಬ್ಬರು ಮುಸ್ಲಿಮ್ ಯುವಕರು ಆರೋಪಿಸಿರುವುದಾಗಿ ಟು ಸರ್ಕಲ್ ಡಾಟ್ ನೆಟ್ ಮಂಗಳವಾರ ವರದಿ ಮಾಡಿದೆ. ‌

ಕದಮ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಠಾಕೂರ್ ಸಹಿತ ಕನಿಷ್ಠ 7 ಮಂದಿ ಪೊಲೀಸ್ ಅಧಿಕಾರಿಗಳು ಆಗಸ್ಟ್ 26ರಂದು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಆರೋಪವನ್ನು ಠಾಕೂರ್ ನಿರಾಕರಿಸಿದ್ದಾರೆ. ಆದರೆ, ವಿಚಾರಣೆಗೆ ಅವರನ್ನು ಠಾಣೆಗೆ ಕರೆಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.
 
ಪೊಲೀಸ್ ಠಾಣೆಯಲ್ಲಿ ಇಬ್ಬರಿಗೂ ಥಳಿಸಿದ ಬಳಿಕ ಪೊಲೀಸ್ ಅಧಿಕಾರಿ ಓರ್ವರಿಗೆ ನೆಲದಲ್ಲಿ ಮಲಗಲು ತಿಳಿಸಿದರು. ಅನಂತರ ನನ್ನಲ್ಲಿ ಅವರ ಪ್ಯಾಂಟ್ ಕಳಚುವಂತೆ ಸೂಚಿಸಿದರು. ಗಾಯಗಳನ್ನು ತೋರಿಸಲು ಹಾಗೆ ಹೇಳಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಮಲಗಿದ್ದವನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಅವರು ಸೂಚಿಸಿದರು ಎಂದು ಅವರು ತಿಳಿಸಿದ್ದಾರೆ. ನಾನು ಅಳಲು ಆರಂಭಿಸಿದೆ. ಅಲ್ಲದೆ, ನನ್ನನ್ನು ಬೇಕಾದರೆ ಕೊಂದು ಹಾಕಿ. ಆದರೆ, ನಾನು ಲೈಂಗಿಕ ಕ್ರಿಯೆ ನಡೆಸಲಾರೆ ಎಂದು ಹೇಳಿದೆ. ಅದಕ್ಕೆ ಅವರು ನೀನು ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ, ಆತ ನಿನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾನೆ ಎಂದು ಬೆದರಿಸಿದರು. ನಾನು ಅದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಅದಕ್ಕೆ ಅವರು ನನ್ನ ಮುಖಕ್ಕೆ ಬೂಟಗಾಲಿನಿಂದ ಒದ್ದರು ಎಂದು ಅವರು ಹೇಳಿದ್ದಾರೆ. 

ನೀವು ತಾಲಿಬಾನ್ ಗಳಂತೆ ಈ ದೇಶವನ್ನು ಅಫ್ಘಾನಿಸ್ಥಾನ ಮಾಡುತ್ತೀರಿ. ಅಫ್ಘಾನಿಸ್ಥಾನದ ಅವ್ಯಸ್ಥೆಯನ್ನು ನೀವು ನೋಡಿದ್ದೀರಾ? ನಿಮ್ಮನ್ನು ಅಲ್ಲಿಗೆ ಕಳುಹಿಸುತ್ತೇವೆ ಎಂದು ಪೊಲೀಸರು ಬೆದರಿಕೆ ಒಡ್ಡಿದ್ದಾರೆ ಎಂದು ಇಬ್ಬರೂ ಆರೋಪಿಸಿದ್ದಾರೆ. ಇಬ್ಬರೂ ವ್ಯಕ್ತಿಗಳು ಪೂರ್ವ ಸಿಂಗ್ಭೂಮ್ ನ ಹಿರಿಯ ಪೊಲೀಸ್ ಅಧೀಕ್ಷಕ ಎಂ. ತಮಿಳ್ ವಾನನ್ ಅವರಿಗೆ ದೂರು ಸಲ್ಲಿಸಿದ್ದಾರೆ. ತಾವು ದೂರು ಸ್ವೀಕರಿಸಿದ್ದೇವೆ ಎಂದು ವಾನನ್ ಅವರು ದೃಢಪಡಿಸಿರುವುದಾಗಿ ಟು ಸರ್ಕಲ್ ಡಾಟಂ ನೆಟ್ ಹೇಳಿದೆ. ಪ್ರಕರಣದ ತನಿಖೆ ನಡೆಸಲು ಉಪ ಪೊಲೀಸ್ (ಕೇಂದ್ರ ಕಚೇರಿ) ಅಧಿಕಾರಿ ಅವರನ್ನು ಕೋರಲಾಗಿದೆ. ತನಿಖಾ ವರದಿ ದೊರೆತ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳ್ ವಾನನ್ ತಿಳಿಸಿದ್ದಾರೆ ಎಂದು ಅದು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News