ಸಂಘಟನೆಯ ಸಾರ್ಥಕ್ಯಕ್ಕಾಗಿ ಬೆವರು ಹರಿಸಿದವರು

Update: 2021-09-02 19:30 GMT

ಕರ್ನಾಟಕ ಸಂಘದ ‘ಕಲಾಭಾರತಿ’ ವೇದಿಕೆ ಜಾತಿ, ಮತ, ನಾಡು, ನುಡಿ, ಧರ್ಮಗಳನ್ನು ಮೀರಿ ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಲಾವೇದಿಕೆಯಾಗಿ ರೂಪುಗೊಂಡಿತ್ತು. ರಾಷ್ಟ್ರಮಟ್ಟವಲ್ಲದೆ ಅಂತರ್‌ರಾಷ್ಟ್ರೀಯ ಮಟ್ಟದ ಭಾರತೀಯ ಕಲಾವಿದರು ದೇಶದ ಮೂಲೆಮೂಲೆಗಳಿಂದ ಈ ವೇದಿಕೆಗೆ ಬಂದಿದ್ದಾರೆ. ಪಾಶ್ಚಾತ್ಯ ಪ್ರಸಿದ್ಧ ಕಲಾವಿದರಾದ ಡ್ಯಾನಿಯಲ್ ಬ್ರಾಡ್ಲಿ, ಕೆನ್‌ಝೆಕೆರ್‌ಮ್ಯಾನ್ ಮೊದಲಾದವರೂ ರಸದೌತಣ ನೀಡಿದ್ದಾರೆ.


ಬಾಬರಿ ಮಸೀದಿ (ಡಿ.6, 1992)ವಿವಾದ ಭುಗಿಲೆದ್ದು ಅಲ್ಲಿಂದ ಹೊರಬಿದ್ದ ಕಿಚ್ಚು ಇಡೀ ಭಾರತವನ್ನೇ ಸುಡುತ್ತಿದ್ದ ಸಂದರ್ಭದಲ್ಲಿ ಅದಕ್ಕೆ ಸಾಕ್ಷಿಭೂತವಾಗಿದ್ದ ಕರ್ನಾಟಕ ಸಂಘದ ಒಳ್ಳೆಯ ಮನಸ್ಸುಗಳು ಆನಂತರದ ದಿನಗಳಲ್ಲಿ ಮೌನವಾಗಿ ನಿದ್ರಿಸಲಿಲ್ಲ. ಮಾನವೀಯ ಕವಿ ಬಿ.ಎ. ಸನದಿ ಮತ್ತು ಡಾ. ವ್ಯಾಸರಾವ್ ನಿಂಜೂರುರವರು ಬಹುಮುಖ್ಯ ನಿರ್ಣಯ ಕೈಗೊಂಡು ಆಡಳಿತ ಸಮಿತಿಯ ಮುಂದಿಟ್ಟಂತೆ ಕರ್ನಾಟಕ ಸಂಘದ ಅಂದಿನ ಅಧ್ಯಕ್ಷ ಸದಾನಂದ ಎ. ಶೆಟ್ಟಿ ಹಾಗೂ ಸರ್ವ ಸಮಿತಿಯ ಪ್ರೋತ್ಸಾಹದಿಂದ ‘ಕಲಾಭಾರತಿ’ ಎಂಬ ವಿಶೇಷ ವೇದಿಕೆಯೊಂದು ಸಿದ್ಧಗೊಂಡು 1993ರ ಫೆಬ್ರವರಿ 28ರಂದು ಮರಾಠಿಯ ಪ್ರಖ್ಯಾತ ಕಲಾ ವಿಮರ್ಶಕ ಹಾಗೂ ಲೇಖಕ ಧ್ಯಾನೇಶ್ವರ್ ನಾಡಕರ್ಣಿ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ‘ಕಲಾಭಾರತಿ’ಯ ನೀತಿ-ನಿಯಮಗಳನ್ನು ವ್ಯಾಸರಾಯ ಬಲ್ಲಾಳರು ರೂಪಿಸಿಕೊಟ್ಟಿದ್ದರು. ಅಂದಿನ ಕಾರ್ಯಾಧ್ಯಕ್ಷರಾಗಿದ್ದ ಬಿ.ಎ. ಸನದಿ ‘ಕಲಾಭಾರತಿ’ಯ ಆಶಯ ಗೀತೆ ರಚಿಸಿದ್ದರು. ಡಾ. ವ್ಯಾಸರಾವ್ ನಿಂಜೂರು (ಸಂಯೋಜಕ) ಅವರ ಸಾರಥ್ಯದಲ್ಲಿ ಬಿ.ಎ. ಸನದಿ, ಜಯರಾಮ ಆಳ್ವ, ಪ್ರಕಾಶ್ ಬುರ್ಡೆ, ಗಜಾನನ ಯಾಜಿ ಹಾಗೂ ಮಿತ್ರಾ ವೆಂಕಟ್ರಾಜ್ ಸಮಿತಿ ಸದಸ್ಯರನ್ನೊಳಗೊಂಡ ‘ಕಲಾಭಾರತಿ’ ತಂಡ ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿ ರೂಪಕವಾಗಿ ಅರಳಿ ನಿಂತಿತು. ಅಂದು ಈ ವೇದಿಕೆ ಪ್ರತಿಷ್ಠೆ ತೋರಿಸಿ ಮೆರೆಯಲೆಂದು ಹುಟ್ಟುಹಾಕಿದ್ದಲ್ಲ. ‘ಕಲಾಭಾರತಿ’ ವೇದಿಕೆಯಡಿ ಸಂಗೀತ, ನೃತ್ಯ ಇತ್ಯಾದಿ ಕಲೆಗಳು ಪ್ರಸ್ತುತಗೊಂಡರೆ ಸರಕಾರ ಅಥವಾ ಇನ್ನಿತರ ಸಂಘ ಸಂಸ್ಥೆಗಳಿಂದ ಹಣ ಬರುತ್ತದೆ ಎಂಬ ಭಾವ ಆ ಹಿರಿಜೀವಗಳಿಗೆ ಕಿಂಚಿತ್ತೂ ಇರಲಿಲ್ಲ. ಆದ್ದರಿಂದಲೇ ಈ ವೇದಿಕೆ ಜಾತಿ, ಮತ, ನಾಡು, ನುಡಿ, ಧರ್ಮಗಳನ್ನು ಮೀರಿ ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಲಾವೇದಿಕೆಯಾಗಿ ರೂಪುಗೊಂಡಿತ್ತು. ರಾಷ್ಟ್ರಮಟ್ಟವಲ್ಲದೆ ಅಂತರ್‌ರಾಷ್ಟ್ರೀಯ ಮಟ್ಟದ ಭಾರತೀಯ ಕಲಾವಿದರು ದೇಶದ ಮೂಲೆಮೂಲೆಗಳಿಂದ ಈ ವೇದಿಕೆಯಲ್ಲಿ ಕಂಗೊಳಿಸಿದ್ದಾರೆ. ಪಾಶ್ಚಾತ್ಯ ಕಲಾವಿದರಾದ ಡ್ಯಾನಿಯಲ್ ಬ್ರಾಡ್ಲಿ ಕೆನ್‌ಝೆಕೆರ್‌ಮ್ಯಾನ್ ಮೊದಲಾದ ಕಲಾವಿದರು ರಸದೌತಣ ನೀಡಿದ್ದಾರೆ.

ಕರ್ನಾಟಕ ಸಂಘದ ‘ಮಾಹಿತಿ ಕೇಂದ್ರ’ ಒಂದೊಮ್ಮೆ ಸಂಘಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದನ್ನು ನಾವು ಮರೆಯಬಾರದು. ಇಲ್ಲಿಂದ ಕರ್ನಾಟಕಕ್ಕೆ ಪರ್ಯಟನಾ ರ್ತಿಗಳಾಗಿ ಹೋಗುವವರಿಗೆ ಈ ಮಾಹಿತಿ ಕೇಂದ್ರ ಆಪ್ತಮಿತ್ರನಾಗಿತ್ತು. ಕರ್ನಾಟಕದ ಎಲ್ಲಾ ಜಿಲ್ಲಾವಾರು, ತಾಲೂಕುವಾರು ಮಾಹಿತಿಗಳು, ಅಲ್ಲಿನ ವಿಶೇಷ ಸ್ಥಳ ಪರಿಚಯ, ಅಲ್ಲಿ ಲಭ್ಯವಿರುವ ವ್ಯವಸ್ಥೆ ಇತ್ಯಾದಿಗಳ ಮಾಹಿತಿ ಪತ್ರಗಳು ಬಹುವರ್ಣದಲ್ಲಿ ಅಲ್ಲಿ ಸಿಗುತ್ತಿದ್ದವು. ವ್ಯಾಸರಾಯ ಬಲ್ಲಾಳರು ಕಾರ್ಯಾಧ್ಯಕ್ಷರಾಗಿದ್ದ ಮಾಹಿತಿ ಕೇಂದ್ರದಲ್ಲಿ ಪ್ರಸಾದ್ ಅವರ ಪರಿಶ್ರಮದಿಂದ ಹೆಚ್ಚಾಗಿ ಅನ್ಯಭಾಷಿಗರು; ಅದರಲ್ಲೂ ಗುಜರಾತಿಗಳು ಕರ್ನಾಟಕ ಸಂಘಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದರು. ಅವರಿಗೆ ಟೇಪ್, ಸ್ಲೈಡ್ ಶೋ, ಕ್ಲಿಪ್ಪಿಂಗ್ಸ್ ಮೊದಲಾದವುಗಳ ಮೂಲಕ ನಮ್ಮ ನಾಡಿನ ನೋಡಲೇ ಬೇಕಾದ ಸ್ಥಳಗಳ ಪರಿಚಯ ಮಾಡಿಸುತ್ತಿದ್ದ ಪ್ರಸಾದ್ ಅವರನ್ನು ಎಷ್ಟು ಸ್ಮರಿಸಿದರೂ ಸಾಲದು. ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಆ ಕ್ಷೇತ್ರವನ್ನು ಪರಿಚಯಿಸುವ ಕಾರ್ಯವನ್ನು ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಅಶೋಕ್ ಜೈನ್ ಅವರು ಶ್ಲಾಘಿಸಿದ್ದು, ಉಪನಗರ ಬೊರಿವಿಲಿಯಲ್ಲಿ ಆ ನಿಮಿತ್ತ ಪ್ರದರ್ಶನವೊಂದನ್ನು ಆಯೋಜಿಸುವಂತೆ ವಿನಂತಿಸಿದ್ದು ಪ್ರಸಾದ್ ಅವರ ನಿಷ್ಠೆಗೆ, ನಿಸ್ವಾರ್ಥ ಸೇವೆಗೆ ಸಂದ ಗೌರವ. ಅಷ್ಟೇ ಅಲ್ಲದೆ ಆ ದಿನಗಳಲ್ಲಿ ಕರ್ನಾಟಕದಲ್ಲಿ ಸಮ್ಮೇಳನ ಜರುಗುತ್ತಿದ್ದಾಗ ಪ್ರತಿವರ್ಷ ಇಲ್ಲಿನ ಲೇಖಕರ ಕೃತಿಗಳನ್ನು ಒಟ್ಟುಗೂಡಿಸಿ, ಆ ಸಮ್ಮೇಳನದಲ್ಲಿ ಮುಂಬೈ ಕನ್ನಡ ಲೇಖಕರ ಕೃತಿಗಳನ್ನು ಪರಿಚಯಿಸುವ ಸದ್ದಿಲ್ಲದೆ ಮಾಡುತ್ತಿದ್ದ ಕಾರ್ಯ ನಾವೆಂದೂ ಮರೆತಿಲ್ಲ. ಇಂತಹ ವ್ಯಕ್ತಿಗಳು ಸದಾ ಕರ್ನಾಟಕ ಸಂಘದಲ್ಲಿ ಇರಬೇಕಿತ್ತು.

1988ರ ಡಿಸೆಂಬರ್ 4ರಂದು ಉದ್ಘಾಟನೆಗೊಂಡಿದ್ದ ಈ ‘ಮಾಹಿತಿ ಕೇಂದ್ರ’ಕ್ಕೆ ಅಂದಿನ ಕರ್ನಾಟಕ ಸರಕಾರ ರೂ. 4 ಲಕ್ಷ ನೀಡಿರುವುದನ್ನು ನಾವು ಗಮನಿಸಲೇಬೇಕು. ಕರ್ಣಾಟಕ ಸಂಘದ ಮಾಹಿತಿ ಕೇಂದ್ರಕ್ಕೆ ‘ಸುರಭಿ’ ಹಾಗೂ ‘ಜಿನನಂದ್’ ಧಾರಾವಾಹಿಗಳ ತಂಡ ಭೇಟಿಯಿತ್ತು ಮಾಹಿತಿ ಪಡೆದದ್ದು ಕೇಂದ್ರದ ಮಹತ್ವಕ್ಕೆ ಸಾಕ್ಷಿ. ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಲಿಂಗರಾಜ್ ಪಾಟೀಲ್ ಅವರ ಶ್ರಮದಾನವನ್ನೂ ನಾವು ಮರೆಯುವಂತಿಲ್ಲ. ಗ್ರಂಥಾಲಯ ಕಂಪ್ಯೂಟರೀಕರಣ ಹೊಂದಿ ಶಾಸ್ತ್ರೀಯ ರೀತಿಯಲ್ಲಿ ಸಜ್ಜುಗೊಳಿಸುವಲ್ಲಿ ಡಾ. ಮಣಿಮಾಲಿನಿ, ಕಂಬದ ಕೋಟೆ ಮೊದಲಾದವರು ಬಹಳಷ್ಟು ಬೆವರು ಸುರಿಸಿದ್ದಾರೆ. ಮುಂದೆ ಸುಮಾರು 25-30 ಸಾವಿರ ಪುಸ್ತಕಗಳ ಅಪರೂಪದ, ಮಹತ್ವದ ಗ್ರಂಥಾಲಯ ಮುಂಬೈ ಕನ್ನಡಿಗರ ಹೆಮ್ಮೆಯ ಕೇಂದ್ರವಾಗಿ ಮೆರೆದಿತ್ತು. ಗ್ರಂಥಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಸಂಚಾರಿ ಗ್ರಂಥಾಲಯವು ಪ್ರಾರಂಭಗೊಂಡು ಕನ್ನಡದ ಅಪೂರ್ವ ಕೃತಿಗಳು ಮುಂಬೈಯ ಗಲ್ಲಿಗಲ್ಲಿಗಳಲ್ಲಿ ಕನ್ನಡದ ಕಂಪನ್ನು ಬೀರಿದ್ದವು.

ಜಯರಾಮ ಆಳ್ವರು ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ರವಿ ರಾ. ಅಂಚನ್ (ಗೌರವ ಕಾರ್ಯದರ್ಶಿ) ಹಾಗೂ ರವಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಜಿ.ಟಿ. ಆಚಾರ್ಯ (ಜತೆ ಕಾರ್ಯದರ್ಶಿ) ಇವರೀರ್ವರ ಶ್ರಮದ ಫಲರೂಪವಾಗಿ ಮೂಡಿಬಂದ ಮಕ್ಕಳ ಮೇಳ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿ ಇಂದೂ ಉದಾಹರಣೆಯಾಗಿ ಕಾಣಸಿಗುತ್ತದೆ. 2001ರ ಜನವರಿ 28ರಂದು ಜರುಗಿದ ಮಕ್ಕಳ ಮೇಳದಲ್ಲಿ ಭಾಗವಹಿಸಿ ಒಟ್ಟು ಕನ್ನಡ ಶಾಲೆಗಳ ಸಂಖ್ಯೆ 44 ಎಂಬುದೇ ಒಂದು ರೋಮಾಂಚನ. ಆ ಸಂದರ್ಭದಲ್ಲಿ ಸಭಾಗೃಹದ ಒಳಗೆ ಮಾತ್ರವಲ್ಲ ಮಿನಿ ಸಭಾಗೃಹದ ಸುತ್ತಮುತ್ತಲೂ ಚಿಣ್ಣರ ಕಲರವ. ಜಯರಾಮ ಆಳ್ವರು ಯುವಕ, ಹಾಗಾಗಿ ಕರ್ನಾಟಕ ಸಂಘದ ಅಧ್ಯಕ್ಷನಾಗಲು ಅನುಭವ ಸಾಲದು ಎಂಬ ಮಾತಂದು ಸಹಜವಾಗಿ ಕೇಳಿ ಬರುತ್ತಿದ್ದಾಗ ರವಿ ರಾ. ಅಂಚನ್, ಜಿ.ಟಿ. ಆಚಾರ್ಯ, ಪ್ರಾ. ಸೀತಾರಾಮ್ ಆರ್. ಶೆಟ್ಟಿ ಮೊದಲಾದವರ ನೆರವಿನಿಂದ, ಮಾರ್ಗದರ್ಶನದಿಂದ ಆಳ್ವರು ಹಿಂದಿನ ಅಧ್ಯಕ್ಷರೆಲ್ಲರ ಹಾದಿಯಲ್ಲೇ ದಿಟ್ಟ ಹೆಜ್ಜೆ ಇಡಲು ಸಾಧ್ಯವಾಯಿತು.
ಕಾವ್ಯೋತ್ಸವ ಅಥವಾ ಕವಿಗೋಷ್ಠಿ ನಡೆದರೆ 30ರಿಂದ 50, ಹೆಚ್ಚೆಂದರೆ 100 ಮಂದಿ ಸೇರಿದರೆ ಹೆಚ್ಚು. ಆದರೆ 2001ರ ಸೆಪ್ಟ್ಟಂಬರ್ 10ರಿಂದ ಮೊದಲ್ಗೊಂಡು 20ರವರೆಗೆ ಜರುಗಿದ ಕಾವ್ಯೋತ್ಸವ ಮುಂಬೈ ಕನ್ನಡಿಗರ ಇತಿಹಾಸದಲ್ಲಿ ಎಂದೂ ಮರೆಯಲಾರದ ಕಾವ್ಯೋತ್ಸವವಾಗಿದೆ.

ಕನ್ನಡ ಹಾಗೂ ಮರಾಠಿ ಕವಿಗಳು ವೇದಿಕೆಯಲ್ಲಿ ಸಮಪಾಲು ಪಡೆದು ನಿರಂತರ ಹತ್ತು ದಿನ ಮುಖ್ಯ ವೇದಿಕೆಯಲ್ಲಿ ಸುಮಾರು 60ರಿಂದ 70 ಕನ್ನಡ-ಮರಾಠಿ ಕವಿಗಳು, ಹಾಗೆಯೇ ಸಮಾನಾಂತರ ಕವಿಗೋಷ್ಠಿ ಕರ್ನಾಟಕ ಸಂಘದ ಸಭಾಗೃಹದ ಸುತ್ತ ರೂಪುಗೊಂಡ ವಿಶೇಷ ವೇದಿಕೆಯಲ್ಲಿ ನಡೆದಿತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈಯ ಯುವ ಕನ್ನಡ ಕವಿಗಳು ಪಾಲು ಪಡೆದದ್ದು ಆ ಸಂಭ್ರಮದ ಖುಷಿಯನ್ನು ಇಮ್ಮಡಿಸಿತ್ತು. ಹವಾನಿಯಂತ್ರಿತ ಸಭಾಗೃಹ ತುಂಬಿದ್ದರೂ, ಕೆಳಗೆ ಕಾವ್ಯ ಸ್ವಾದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿ ಯಾರೋ ನಿರಾಶರಾಗದ ರೀತಿಯಲ್ಲಿ ಕನ್ನಡ-ಮರಾಠಿ ಕವಿಗಳನ್ನು ಕಾಣುವ, ಕೇಳುವಂತೆ ಮಾಡಿದ್ದು ಆ ಕಾವ್ಯೋತ್ಸವದ ಗೆಲುವನ್ನು ಎತ್ತಿ ತೋರಿಸುತ್ತದೆ. ‘ಕಾವ್ಯೋತ್ಸವ-2001’ ರೂಪುಗೊಂಡದ್ದು ರಂಗಭೂಮಿ ಕಲಾವಿದರು, ಕವಿಗಳಾದ ಅರುಣ್ ಮ್ಹಾತ್ರೆ, ಕಿಶೋರ್ ಕದಂ, ಸತೀಶ್ ಪಾಟೀಲ್ ಮತ್ತು ಅಶೋಕ್ ನಾಯ್ಗೆಂವ್ಕರ್ ಅವರ ಮನಸ್ಸಿನಲ್ಲಿ, ಅದಕ್ಕೆ ಸಹಯೋಗ ಕರ್ನಾಟಕ ಸಂಘದ್ದು. ಹಾಗಾಗಿ ‘ಕಾವ್ಯೋತ್ಸವ-2001’ ಅದ್ಭುತ ರೀತಿಯಲ್ಲಿ ನಡೆದಿತ್ತು. ಅಮೋಲ್ ಪಾಲೇಕರ್, ನಾನಾ ಪಾಟೇಕರ್, ರೇಣುಕಾ ರಾಣಾ, ಸುಲಭ ದೇಶಪಾಂಡೆ, ಮೃಣಾಲ್ ಕುಲಕರ್ಣಿ, ಸಚಿನ್ ಖೇಡೇಕರ್ ಮೊದಲಾದವರು ನಿರೂಪಕರಾಗಿದ್ದು ತಮ್ಮ ಪ್ರೀತಿಯನ್ನು ತೋರಿಸಿದ್ದರು. ಕನ್ನಡದ ಜಯಂತ್ ಕಾಯ್ಕಿಣಿ, ದುಂಡಿರಾಜ್ ಮೊದಲಾದ ಕವಿಗಳು ಉಭಯ ಕಾವ್ಯರಸಿಕರನ್ನು ತೃಪ್ತಿಗೊಳಿಸಿದ್ದರು. ಸಮಾರೋಪಕ್ಕೆ ಆಗಮಿಸಿದ್ದ ಅಂದಿನ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದ ಗುರುಲಿಂಗ ಕಾಪ್ಸೆಯವರು ಅಂದಿನ ಕಾವ್ಯೋತ್ಸವದ ಯಶಸ್ಸಿಗೆ ಸಾಕ್ಷೀಭೂತರಾಗಿದ್ದರು.

ಕರ್ನಾಟಕ ಸಂಘವನ್ನು ಎಲ್ಲಾ ಕನ್ನಡಿಗರ ಬಳಿಗೆ ಕೊಂಡೊಯ್ಯುವ, ಎಲ್ಲರನ್ನೂ ಒಟ್ಟು ಸೇರಿಸಿ ನಡೆಯುವ ಆ ಮೂಲಕ ಸಂಘವನ್ನು ಪ್ರಾತಿನಿಧಿಕ ಸಂಸ್ಥೆಯಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಉತ್ಸವ’ ಮಹತ್ವದ್ದು. ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ‘ಮಕ್ಕಳ ನಾಟಕೋತ್ಸವ’ದ ಆಯೋಜನೆ ಒಂದು ಬಹುಮುಖ್ಯ ಯೋಜನೆಗಳಲ್ಲಿ ಒಂದು. ಅದರ ರೂಪುರೇಷೆ ಹಾಗೂ ಮುಂದಾಳತ್ವವನ್ನು ವಹಿಸಿ ನಿರ್ವಹಿಸುತ್ತಿದ್ದವರು ಕ್ರಿಯಾಶೀಲ ವ್ಯಕ್ತಿತ್ವದ ಗಿರಿಧರ ಕಾರ್ಕಳ. ‘ಶಿವರಾಮ ಕಾರಂತ ಮಕ್ಕಳ ನಾಟಕೋತ್ಸವ’ ಹೆಸರಿನಲ್ಲಿ ಆಯೋಜಿಸಲ್ಪಡುತ್ತಿರುವ ಈ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ಶಾಲೆಗಳ ಒಪ್ಪಿಗೆ ಪಡೆದು ತಾವು ಆಯ್ಕೆ ಮಾಡಿದ ನಾಟಕ ಕೃತಿ ಹಾಗೂ ರಂಗ ನಿರ್ದೇಶಕರನ್ನು ಶಾಲೆಗಳಿಗೆ ಕಳುಹಿಸಿ ಕೊಡುವ ಹೊಣೆ ಕಷ್ಟದಾಯಕ. ನಾಟಕಗಳ ಒಟ್ಟು ವೆಚ್ಚವನ್ನು ಕರ್ನಾಟಕ ಸಂಘವೇ ಭರಿಸುತ್ತಿತ್ತು. ಈ ಯೋಜನೆಯು ಮುಂದೆ ಯಾಕೋ ನಿಧಾನವಾಗಿ ಪರದೆಯ ಹಿಂದೆ ಸರಿದು ಹೋಯಿತು. ಮಕ್ಕಳಲ್ಲಿ ಅಭಿನಯ ಕಲೆ ಮೂಡಿಸುವ ಈ ಪ್ರಕ್ರಿಯೆ ನಿರಂತರ ನಡೆಯಬೇಕಿತ್ತು.

ಸಂಘದ ಕಟ್ಟಡ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ವರದರಾಜ ಆದ್ಯರು ನಿಧನರಾದ ಆನಂತರ ಅವರ ನೆನಪಿನಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕರ ಸ್ನೇಹ ಸಂವರ್ಧನೆಗಾಗಿ ಶ್ರಮಿಸುತ್ತಾ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಕರ್ನಾಟಕ ಸಂಘವು ‘ವರದರಾಜ ಆದ್ಯ ಸ್ಮಾರಕ ಪುರಸ್ಕಾರ’ ನೀಡುತ್ತಾ ಬರುತ್ತಿದೆ. ಎಳೆಯ ಪ್ರಾಯದಲ್ಲೇ ತಮ್ಮ ಕಾವ್ಯದ ಮೂಲಕ ಗುರುತಿಸಿಕೊಂಡಿದ್ದ ಪೇಜಾವರ ಸದಾಶಿವರಾಯರು ದೂರದ ಇಟಲಿಯಲ್ಲಿ ತಮ್ಮ 27ರ ಹರೆಯದಲ್ಲೇ ಇಹಲೋಕ ಯಾತ್ರೆ ಮುಗಿಸಿದ್ದರು. ಅವರ ಸ್ಮರಣೆಯಲ್ಲಿ ಕರ್ನಾಟಕ ಸಂಘವು ಯುವಕವಿಗಳಿಗೆ ‘ಪೇಜಾವರ ಸದಾಶಿವರಾಯರ ಸ್ಮರಣಾರ್ಥ ಕಾವ್ಯ ಪುರಸ್ಕಾರ’ ನೀಡುತ್ತಾ ಬಂದಿದೆ. ಕರ್ನಾಟಕ ಸಂಘದ ವಜ್ರಮಹೋತ್ಸವ 1994ರಲ್ಲಿ ಆಚರಿಸಲ್ಪಟ್ಟಿತ್ತು. ಅಂದಿನ ಕಾರ್ಯಾಧ್ಯಕ್ಷರಾಗಿದ್ದ ಬಿ.ಎ. ಸನದಿಯವರು ವಜ್ರಮಹೋತ್ಸವದ ಒಟ್ಟು ರೂಪುರೇಷೆಯನ್ನು ಅಂದಿನ ಅಧ್ಯಕ್ಷರಾಗಿದ್ದ ಸದಾನಂದ ಎ. ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸಹಕಾರದಿಂದ ರೂಪಿಸಿದ್ದರು. 1994ರ ಜೂನ್ 6ರಂದು ಉದ್ಘಾಟನೆಗೊಂಡ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡು ಕಾರ್ಯನಿರ್ವಹಿಸಿದ್ದವರು ಅಂದಿನ ನಿವೃತ್ತ ಜಸ್ಟಿಸ್ ಹೊಸಬೆಟ್ಟು ಸುರೇಶ್. ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದವರು ಮುರಳೀಧರ ಹತ್ತಂಗಡಿ. ಈ ಸಂದರ್ಭದಲ್ಲಿ ಯುವ ವಿಭಾಗದಿಂದ ರಂಗತಂಡವೊಂದು ಸಿದ್ಧಗೊಂಡು ಪ್ರಥಮ ನಾಟಕ ಡಾ. ವ್ಯಾಸರಾವ್ ನಿಂಜೂರು ಅವರ ‘ನಲ್ವತ್ತರ ನಲುಗು’ ಸಾದರಗೊಂಡಿತ್ತು. ಈ ವಿಭಾಗದಿಂದ ಮೋಹನ್ ಮಾರ್ನಾಡ್, ಶ್ರೀಪತಿ ಬಲ್ಲಾಳ್, ಸಂತೋಷ್ ಬಲ್ಲಾಳ್, ಗಿರಿಧರ ಕಾರ್ಕಳ ಮೊದಲಾದ ನಿರ್ದೇಶಕರ ನಾಟಕಗಳು ರಂಗಕ್ಕೇರಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಸುಮಾರು 25-30 ವರ್ಷಗಳಿಂದ ನಡೆಯುತ್ತಿದ್ದ ಕನ್ನಡ-ಮರಾಠಿ ಕಲಿಕಾ ತರಗತಿಗಳು ಸಂಘದ ಮಹತ್ವದ ಹೆಜ್ಜೆ ಗುರುತುಗಳಲ್ಲಿ ಒಂದು. ಕನ್ನಡ ಕಲಿಯಲೆಂದು ಇಲ್ಲಿ ಬಂದು ತರಗತಿಗಳಿಗೆ ಸೇರಿಕೊಂಡು ಕನ್ನಡಿಗರಂತೆ ಮಾತನಾಡಿದ, ವ್ಯವಹರಿಸಿದ ಮರಾಠಿ ಹಾಗೂ ಇತರ ಭಾಷಿಕರನ್ನು ನಾವು ನೆನೆಯಬೇಕಾಗಿದೆ. ಇಲ್ಲಿ ಕನ್ನಡ ಕಲಿತು ಮುಂದೆ ಕನ್ನಡದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರನ್ನೂ ನಾವು ಕಾಣುತ್ತೇವೆ. ಸಂಘದ ಕನ್ನಡ ತರಗತಿಯ ಶ್ರೇಯ ಲಕ್ಷ್ಮೀ ಸುಧೀಂದ್ರ ಅವರಿಗೆ ಸಲ್ಲುತ್ತದೆ. ಸ್ವಇಚ್ಛೆಯಿಂದ ಯಾವುದೇ ಪ್ರತಿಫಲವಿಲ್ಲದೆ ಪ್ರೀತಿಯಿಂದ ಕನ್ನಡ ಕಲಿಸುತ್ತಿದ್ದ ಲಕ್ಷ್ಮೀ ಸುಧೀಂದ್ರರವರು ಮುಂಬೈ ಕನ್ನಡಿಗರ ಬಹು ದೊಡ್ಡ ಆಸ್ತಿ ಎನ್ನಬಹುದು. ಬಹುಮುಖ ಪ್ರತಿಭೆಯ ಇವರು ತಾನು ಕಲಿಸಿದ ತನ್ನ ತರಗತಿಯ ವಿದ್ಯಾರ್ಥಿಗಳಿಂದಲೇ (ಇವರಲ್ಲಿ ಕೆಲವರು ಸ್ವ ಉದ್ಯೋಗಿಗಳು, ವೈದ್ಯರು, ಸರಕಾರಿ ಅಧಿಕಾರಿಗಳು, ಇಂಜಿನಿಯರ್‌ಗಳು, ವಿದ್ಯಾರ್ಥಿಗಳು ಎಲ್ಲರೂ ಸೇರಿದ್ದರು) ಕರ್ನಾಟಕ ಸಂಘದ ಕುವೆಂಪು ನಾಟಕೋತ್ಸವಕ್ಕಾಗಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಲಂಕೇಶ್, ಜಯಂತ ಕಾಯ್ಕಿಣಿ ಮೊದಲಾದವರ ನಾಟಕಗಳನ್ನು ರಂಗಕ್ಕೆ ತರುತ್ತಿದ್ದರು. ಲಕ್ಷ್ಮೀ ಸುಧೀಂದ್ರ ಅವರ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವಾ ಮನೋಭಾವ ಅವರನ್ನು ಮುಂಬೈ ಕನ್ನಡಿಗರು ಸದಾ ನೆನೆಯುವಂತೆ ಮಾಡಿದೆ. ಆದರೆ ಅವರು ಇದ್ದಾಗ ಅವರನ್ನು ಗುರುತಿಸುವ ಹೃದಯವೈಶಾಲ್ಯ ಮುಂಬೈಗರಲ್ಲಿ ಇಲ್ಲದೆ ಹೋಯಿತು. ಅದಾವುದನ್ನೂ ಬಯಸದ, ಅವೆಲ್ಲವನ್ನೂ ಮೀರಿ ನಿಂತ ವ್ಯಕ್ತಿತ್ವ ಅವರದ್ದು.

ಕರ್ನಾಟಕ ಸಂಘದ ಮಹಿಳಾ ವಿಭಾಗ ಸಂಘಕ್ಕೆ ಹೊಸ ಮೆರುಗನ್ನು ನೀಡಿತ್ತು. ಹಲವಾರು ಸಾಹಿತ್ಯ ಗೋಷ್ಠಿಗಳು, ವಸ್ತು ಪ್ರದರ್ಶನ, ರಂಗೋಲಿ ಸ್ಪರ್ಧೆ ಹೀಗೆ ಎಲ್ಲಾ ರೀತಿಯಲ್ಲೂ ಮಹಿಳೆಯರನ್ನು ಉತ್ತೇಜಿಸುವ ಪ್ರಕ್ರಿಯೆ ಇಲ್ಲಿ ನಡೆಯುತ್ತಿತ್ತು. ಗಾಯತ್ರಿ ರಾಮು ಮೊದಲಾದ ಹಿರಿಯರ ಪರಿಶ್ರಮ ಇಲ್ಲಿ ಸಂಘಕ್ಕೂ ಮೆರುಗು ಕೊಡುತ್ತ್ತಿತ್ತು. ಕರ್ನಾಟಕ ಸಂಘದಲ್ಲಿ ನಿರಂತರ ಊರಿನ ತಂಡಗಳ ಯಕ್ಷಗಾನ, ನಾಟಕಗಳು ರಂಗಕ್ಕೇರುತ್ತಿದ್ದವು. ಮೇರ್ಲ ಸಂಜೀವ ಶೆಟ್ಟಿ, ಸಾಧು ಶೆಟ್ಟಿ, ಸುರೇಂದ್ರ ಶೆಟ್ಟಿ, ಜಯರಾಮ ಶೆಟ್ಟಿ ಮೊದಲಾದವರು ಹಾಕಿಕೊಟ್ಟ ದಾರಿಯಲ್ಲಿ ನಡೆದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಂಜೀವ ಡಿ. ಕಾಂಚನ್, ಮೂಳೂರು, ಸುರತ್ಕಲ್ ಪ್ರಕಾಶ ಎಂ. ಶೆಟ್ಟಿ, ಕರ್ನೂರು ಮೋಹನ್ ರೈ, ಕರುಣಾಕರ ಶೆಟ್ಟಿ, ಕುಕ್ಕುಂದೂರು ಮೊದಲಾದವರು ಕಲೆಯ ಸೆಳೆತದಿಂದ ತಮ್ಮೂರಿನ ತಂಡಗಳನ್ನು ಈ ನಗರಿಗೆ ಆಹ್ವಾನಿಸಿ ಇಲ್ಲಿನ ಕನ್ನಡಿಗರು ತಮ್ಮ ಕಲೆಯ ಸ್ವಾದ ಸವಿಯುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

ಊರಿನ ತಂಡಗಳಾದ ದೇವದಾಸ್ ಕಾಪಿಕಾಡ್ ಅವರ ‘ಚಾಪರ್ಕ’ ತಂಡ, ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರ ‘ಕಲಾ ಸಂಗಮ’, ಲಯನ್ ಕಿಶೋರ್ ಶೆಟ್ಟಿ ಅವರ ‘ಲಕುಮಿ’, ಶರತ್ ಶೆಟ್ಟಿ ಕಿನ್ನಿಗೋಳಿ ಅವರ ‘ವಿಜಯ ಕಲಾವಿದರು’, ಪಿ.ಬಿ. ರೈಯವರ ‘ನಂದಿಕೇಶ್ವರ ನಾಟಕ ತಂಡ’, ಉಮೇಶ್ ಮಿಜಾರ್ ಅವರ ‘ನಮ್ಮ ಕಲಾವಿದರು, ಬೆದ್ರ’, ಕೃಷ್ಣ ಜಿ. ಮಂಜೇಶ್ವರ ಅವರ ‘ಶಾರದಾ ಆರ್ಟ್ಸ್’, ಚಿದಾನಂದ ಅದ್ಯಪಾಡಿ ಅವರ ‘ವಿಧಾತ್ರಿ ಕಲಾವಿದರು’, ಶಿವಾನಂದ ಶೆಟ್ಟಿ, ಮಂಗಲಪಾಡಿಯವರ ‘ಅಮ್ಮ ಕಲಾವಿದರು’ ಮೊದಲಾದ ನಾಟಕ ತಂಡಗಳು ಹಾಗೂ ವೈ. ಕರುಣಾಕರ ಶೆಟ್ಟಿ ಅವರ ಪೆರ್ಡೂರು ಮೇಳ, ಪಳ್ಳಿ ಕಿಶನ್ ಹೆಗ್ಡೆಯವರ ಸಾಲಿಗ್ರಾಮ ಮತ್ತು ಮಂಗಳಾದೇವಿ ಮೇಳ, ಕಲ್ಲಾಡಿ ವಿಠಲ ಶೆಟ್ಟಿ ಅವರ ಕರ್ನಾಟಕ ಮೇಳ, ವರದರಾಜ ಪೈಯವರ ಸುರತ್ಕಲ್ ಮೇಳ, ಡಿ. ಮನೋಹರ್ ಕುಮಾರ್ ಅವರ ಕದ್ರಿಮೇಳ ಅಲ್ಲದೆ ಸಿರ್ಸಿ ಮೇಳ, ಮಾರಣಕಟ್ಟೆ ಮೇಳ ಹಾಗೂ ಇನ್ನಿತರ ಮೇಳಗಳನ್ನು ಮುಂಬೈಗೆ ಆಹ್ವಾನಿಸಿ ನಾಟಕ, ಯಕ್ಷಗಾನ ಆಡಿಸುತ್ತಿದ್ದರು. ಹೆಚ್ಚಿನ ನಾಟಕ, ಯಕ್ಷಗಾನಗಳು ಪ್ರದರ್ಶನಗೊಳ್ಳುತ್ತಿದ್ದುದು ಕರ್ನಾಟಕ ಸಂಘದ ಸಭಾಗೃಹದಲ್ಲಿ. ಆ ಸಭಾಂಗಣ ದಲ್ಲಿ ತಮ್ಮ ಕಲೆ ಪ್ರದರ್ಶಿಸದ ಊರಿನ ತಂಡಗಳಿಲ್ಲ ಎನ್ನಬಹುದು. ಊರಿನ ಈ ಕಲಾವಿದರನ್ನು ಮುಂಬೈ ಕಲಾರಸಿಕರ ಮಧ್ಯೆ ಸಂಘಟಕರು ಯೋಗ್ಯ ರೀತಿಯಲ್ಲಿ ಗೌರವಿಸುತ್ತಿದ್ದರು. ಇಲ್ಲಿನ ಪ್ರೇಕ್ಷಕ ವರ್ಗ ಹಾಗೂ ಊರಿನ ನಾಟಕ ಯಕ್ಷಗಾನ ಕಲಾವಿದರ ನಡುವೆ ರೂಪುಗೊಂಡ ಸ್ನೇಹಸೇತುಗೆ ಇಲ್ಲಿನ ಸಾಂಸ್ಕೃತಿಕ ಭವನ ಸಾಕ್ಷಿಭೂತವಾಗಿ ಕಲಾವಿದರಿಗೂ ಪ್ರೇಕ್ಷಕರಿಗೂ ಒಂದು ರೀತಿಯ ಮುದ ನೀಡಿದ ಆ ಕ್ಷಣಗಳು ಇಂದಿನ ದಿನಗಳಲ್ಲಿ ಮರೀಚಿಕೆಯಾಗಿದೆ. ಮುಂದಾಲೋಚನೆ ಇಟ್ಟುಕೊಂಡು ಹಿರಿಯರು ಕಟ್ಟಿದ ಸೌಧಕ್ಕೆ 37ರ ಹರೆಯ ತುಂಬುತ್ತಿದ್ದಂತೆ ಏಕಾಏಕಿ ಏನಾಯಿತು? ಯಾಕಾಯಿತು? ಇದು ಮುಂಬೈ ಕನ್ನಡಿಗರ ದುರಂತವನ್ನು ಸೂಚಿಸುತ್ತಿದೆಯೇ? ಮುಂದೆ ಇದನ್ನು ಚರ್ಚಿಸೋಣ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News