ಶೇ.40ರಷ್ಟು ಭಾರತೀಯ ಕುಟುಂಬಗಳು ಆ್ಯಂಟಿಬಾಡಿ ಪರೀಕ್ಷೆಗೊಳಗಾದ ಒಬ್ಬರು ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿವೆ: ಸಮೀಕ್ಷೆ
ಹೊಸದಿಲ್ಲಿ,ಸೆ.3: ಶೇ.40ರಷ್ಟು ಭಾರತೀಯ ಕುಟುಂಬಗಳು ಈ ವರ್ಷ ಕೋವಿಡ್-19 ಆ್ಯಂಟಿಬಾಡಿ (ಪ್ರತಿಕಾಯ) ಪರೀಕ್ಷೆಯನ್ನು ಮಾಡಿಸಿಕೊಂಡಿರುವ ಒಬ್ಬರು ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿವೆ ಎಂದು ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಲಸಿಕೆ ನೀಡುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತಿರುವ ಜೊತೆಗೆ ಲಸಿಕೆಯ ಪರಿಣಾಮಕಾರಿತ್ವವನ್ನು ಅಳೆಯಲು ಅಥವಾ ತಾವು ಕೊರೋನವೈರಸ್ ಸೋಂಕಿಗೆ ಒಡ್ಡಿಕೊಂಡಿದ್ದೇವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಆ್ಯಂಟಿಬಾಡಿ ಅಥವಾ ಸೆರಾಲಜಿ ಪರೀಕ್ಷೆಗೊಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸಮೀಕ್ಷಾ ವರದಿಯು ತಿಳಿಸಿದೆ.
ದೇಶದ 318 ಜಿಲ್ಲೆಗಳ 24,000 ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಶೇ.64ರಷ್ಟು ಪುರುಷರಾಗಿದ್ದರೆ,ಶೇ.36ರಷ್ಟು ಮಹಿಳೆಯರಾಗಿದ್ದರು. ಸಮೀಕ್ಷೆಗೊಳಗಾದವರ ಪೈಕಿ ಶೇ.42ರಷ್ಟು ಮೊದಲ ದರ್ಜೆಯ ಜಿಲ್ಲೆಗಳಿಗೆ,ಶೇ.31ರಷ್ಟು ಎರಡನೇ ದರ್ಜೆಯ ಜಿಲ್ಲೆಗಳಿಗೆ ಹಾಗೂ ಶೇ.27ರಷ್ಟು ಜನರು 3,4ನೇ ದರ್ಜೆಯ ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದರು.
ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ ಲಸಿಕೆ ಪಡೆದಿರುವವರಲ್ಲಿ ಆ್ಯಂಟಿಬಾಡಿಗಳು ಅಭಿವೃದ್ಧಿಗೊಳ್ಳಲು ಸುಮಾರು ಎರಡು ವಾರಗಳು ಬೇಕಾಗುತ್ತವೆ ಮತ್ತು ಲಸಿಕೆ ಪಡೆಯದಿದ್ದವರಲ್ಲಿ ಈ ಪ್ರಕ್ರಿಯೆಯು ಎರಡರಿಂದ ಮೂರು ವಾರಗಳನ್ನು ತೆಗೆದುಕೊಳ್ಳುತ್ತದೆ.
ರೋಗ ನಿರೋಧಕ ವ್ಯವಸ್ಥೆಯು ಆ್ಯಂಟಿಬಾಡಿಗಳನ್ನು ಅಭಿವೃದ್ಧಿಗೊಳಿಸುತ್ತದೆ. ಪ್ರೋಟಿನ್‌ಗಳಾಗಿರುವ ಇವು ಲಸಿಕೆ ಪಡೆದ ನಂತರವೂ ನಮ್ಮ ಶರೀರಕ್ಕೆ ವೈರಸ್‌ನಂತಹ ಯಾವುದೇ ಬೆದರಿಕೆಗಳನ್ನು ಪತ್ತೆ ಹಚ್ಚುತ್ತವೆ ಮತ್ತು ತಕ್ಷಣವೇ ವೈರಸ್ ಕಣಗಳನ್ನು ಗುರುತಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಲು ನೆರವಾಗುತ್ತವೆ.
ಕೋವಿಡ್-19 ಆ್ಯಂಟಿಬಾಡಿ ಪರೀಕ್ಷೆಯು ತಮ್ಮ ರಕ್ತದಲ್ಲಿ ಪ್ರತಿಕಾಯಗಳ ಸಾಂದ್ರತೆಯಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಜನರಿಗೆ ಅವಕಾಶವನ್ನು ಒದಗಿಸುತ್ತದೆ,ಆದರೆ ಶರೀರದಲ್ಲಿ ಆ್ಯಂಟಬಾಡಿಗಳಿವೆ ಎಂದ ಮಾತ್ರಕ್ಕೆ ವ್ಯಕ್ತಿಯು ಕೋವಿಡ್‌ನಿಂದ ಪ್ರತಿರಕ್ಷಿತನಾಗಿದ್ದಾನೆ ಎಂದು ಅರ್ಥವಲ್ಲ ಎಂದು ಹಲವಾರು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.