ಉತ್ತರಪ್ರದೇಶ: 4 ವರ್ಷಗಳಿಂದ ಮದ್ರಸಾ ಶಿಕ್ಷಕರಿಗೆ ದೊರೆಯದ ಗೌರವಧನ

Update: 2021-09-03 17:04 GMT

ಲಕ್ನೋ, ಸೆ.3: ಉತ್ತರಪ್ರದೇಶದಲ್ಲಿ ಕೇಂದ್ರ ಸರಕಾರವು ನೇಮಿಸಿದ 21 ಸಾವಿರಕ್ಕೂ ಅಧಿಕ ಮದ್ರಸಾ ಶಿಕ್ಷಕರಿಗೆ ಕಳೆದ 53 ತಿಂಗಳುಗಳಲ್ಲಿ ಗೌರವಧನ ಪಾವತಿಸಲಾಗಿಲ್ಲವೆಂಬುದು ಇದೀಗ ಬೆಳಕಿಗೆ ಬಂದಿದೆ ಎಂದು ‘thewire.in’ ವರದಿ ಮಾಡಿದೆ. ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು 2009ರಲ್ಲಿ ಜಾರಿಗೊಳಿಸಲಾ ಎಸ್‌ಪಿಕ್ಯುಇಎಂ (ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಯೋಜನೆ) ಯೋಜನೆಯಡಿ  ಈ ಅಧ್ಯಾಪಕರನ್ನು ನೇಮಿಸಲಾಗಿತ್ತು .

ಸುಮಾರು 7742 ಮದ್ರಸಾಗಳು ಉತ್ತರಪ್ರದೇಶದಲ್ಲಿ ಎಸ್‌ಪಿಕ್ಯುಇಎಂ ಯೋಜನೆಯಡಿ ನೋಂದಣಿಯಾಗಿದೆ. ಮದ್ರಸಾ ಪಠ್ಯಕ್ರಮಕ್ಕಿಂತ ಹೊರತಾದ ವಿವಿಧ ಪಠ್ಯವಿಷಯಗಳನ್ನು ಬೋಧಿಸಲು ಈ ಅಧ್ಯಾಪಕರನ್ನು ನೇಮಿಸಲಾಗಿತ್ತು. ಧಾರ್ಮಿಕೇತರ ಪಠ್ಯವಿಷಯಗಳನ್ನು ಕಲಿಸಲು ಪ್ರತಿಯೊಂದು ಮದ್ರಸಾದಲ್ಲಿಯೂ ಎರಡು-ಮೂರು ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಅವರ ಶಿಕ್ಷಣ ಹಾಗೂ ಅರ್ಹತೆಯ ಆಧಾರದಲ್ಲಿ ಈ ಶಿಕ್ಷಕರಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಗೌರವಧನವನ್ನು ಪಾವತಿಸುತ್ತವೆ. ಈ ಶಿಕ್ಷಕರನ್ನು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರೆಂದು ಎರಡು ಶ್ರೇಣಿಗಳಲ್ಲಿ ವಿಭಾಗಿಸಲಾಗಿದೆ.

 ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2009ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅದನ್ನು ನಡೆಸುತ್ತಿತ್ತು. 2021ರ ಎಪ್ರಿಲ್ 1ರಿಂದ ಅದನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News