ಕೋಚ್ ವಿರುದ್ಧವೇ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ
ಹೊಸದಿಲ್ಲಿ: ರಾಷ್ಟ್ರೀಯ ತರಬೇತುದಾರ ಸೌಮ್ಯದೀಪ್ ರಾಯ್ ಅವರು ಮಾರ್ಚ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಅವರ ವಿದ್ಯಾರ್ಥಿ ವಿರುದ್ಧ ಸೋಲಲು ನನ್ನನ್ನು ಕೇಳಿಕೊಂಡಿದ್ದರು. ಟೋಕಿಯೊ ಕ್ರೀಡಾಕೂಟದ ಸಿಂಗಲ್ಸ್ ಸ್ಪರ್ಧೆಯಲ್ಲಿ ಅವರ ಸಹಾಯವನ್ನು ನಿರಾಕರಿಸಲು ಇದು ಮುಖ್ಯ ಕಾರಣ ಎಂದು ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಹೇಳಿದ್ದಾರೆ.
ಭಾರತದ ಟೇಬಲ್ ಟೆನಿಸ್ ಫೆಡರೇಶನ್ (ಟಿಟಿಎಫ್ ಐ) ಶೋಕಾಸ್ ನೋಟಿಸ್ ಗೆ ಪ್ರತಿಕ್ರಿಯಿಸಿದ ಮಣಿಕಾ, ಕೋಚ್ ರಾಯ್ ಅವರ ಸಹಾಯವನ್ನು ನಿರಾಕರಿಸುವ ಮೂಲಕ ಕ್ರೀಡೆಗೆ ಅಪಕೀರ್ತಿ ತಂದಿದ್ದನ್ನು ಬಲವಾಗಿ ನಿರಾಕರಿಸಿದರು.
"ರಾಷ್ಟ್ರೀಯ ತರಬೇತುದಾರ ರಾಯ್ ಮಾರ್ಚ್ 2021 ರಲ್ಲಿ ದೋಹಾದಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಯಲ್ಲಿ ತನ್ನ ವಿದ್ಯಾರ್ಥಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅನುಕೂಲವಾಗುವಂತೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ನನ್ನ ಮೇಲೆ ಒತ್ತಡ ಹೇರಿದ್ದರು’’ ಎಂದು ಟಿಟಿಎಫ್ ಐ ಕಾರ್ಯದರ್ಶಿ ಅರುಣ್ ಬ್ಯಾನರ್ಜಿಗೆ ನೀಡಿರುವ ಉತ್ತರದಲ್ಲಿ ಮಣಿಕಾ ಆರೋಪಿಸಿದರು.
“ಈ ಘಟನೆಗೆ ನನ್ನ ಬಳಿ ಪುರಾವೆಗಳಿವೆ ಹಾಗೂ ಅದನ್ನು ಸೂಕ್ತ ಸಮಯದಲ್ಲಿ ಸಮರ್ಥ ಅಧಿಕಾರಿಗಳಿಗೆ ಪ್ರಸ್ತುತಪಡಿಸಲು ನಾನು ಸಿದ್ಧ. ಪಂದ್ಯವನ್ನು ಸೋಲುವಂತೆ ಕೇಳಿಕೊಳ್ಳಲು ರಾಷ್ಟ್ರೀಯ ತರಬೇತುದಾರ ರಾಯ್ ನನ್ನ ಹೋಟೆಲ್ ಕೋಣೆಯಲ್ಲಿ ವೈಯಕ್ತಿಕವಾಗಿ ನನ್ನನ್ನು ಭೇಟಿಯಾಗಿದ್ದರು ಹಾಗೂ ಸುಮಾರು 20 ನಿಮಿಷಗಳ ಕಾಲ ನನ್ನೊಂದಿಗೆ ಮಾತನಾಡಿದ್ದರು. ಅವರು ತನ್ನ ಸ್ವಂತ ವಿದ್ಯಾರ್ಥಿಯನ್ನು ರಾಷ್ಟ್ರೀಯ ಹಿತಾಸಕ್ತಿಯ ನೆಪದಲ್ಲಿ ಅನೈತಿಕ ವಿಧಾನಗಳನ್ನು ಬಳಸಿ ಉತ್ತೇಜಿಸಲು ಪ್ರಯತ್ನಿಸಿದರು"ಎಂದು ಮಣಿಕಾ ಹೇಳಿದರು.