ಚತ್ತೀಸ್ಗಢ: ಒಂದೇ ದಿನ 101 ಮಹಿಳೆಯರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ

Update: 2021-09-04 17:15 GMT

ರಾಯಪುರ,ಸೆ.4: ಸುರುಗುಜ ಜಿಲ್ಲೆಯಲ್ಲಿ ರಾಜ್ಯ ಸರಕಾರ ಇತ್ತೀಚೆಗೆ ನಡೆಸಿದ ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ   ತನಿಖೆಗೆ ಚತ್ತೀಸ್ಗಢ ಸರಕಾರ ಆದೇಶಿಸಿದೆ.

ಈ ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಚಿಕಿತ್ಸಾ ತಜ್ಞರೊಬ್ಬರು ಏಳು ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನ ಹರಣ ಚಿಕಿತ್ಸೆ ನಡೆಸಿದ್ದರು.

ರಾಜಧಾನಿ ರಾಯಪುರದಿಂದ 300 ಕಿ.ಮೀ. ದೂರದಲ್ಲಿರುವ ಜಿಲ್ಲೆಯ ಮನಿಪಾತ್ ಡೆವಲಪ್ಮೆಂಟ್ ಬ್ಲಾಕ್ ನ ನರ್ಮದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ 27ರಂದು ಈ ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗಿತ್ತು.

ಈ ಶಿಬಿರದಲ್ಲಿ  ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಸುದ್ದಿ ಪತ್ರಿಕೆಗಳು ವರದಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕ್ರಮಕ್ಕೆ ಇಳಿದಿತ್ತು. ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗೆ  ಶೋಕಾಸ್ ನೋಟಿಸು ಜಾರಿ ಮಾಡಿತ್ತು.

ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ  ಆಧರಿಸಿ ಮುಂದಿನ ಕ್ರಮ ಕೈಕೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಕಾರ್ಯದರ್ಶಿ ಡಾ. ಅಶೋಕ್ ಶುಕ್ಲಾ ಹೇಳಿದ್ದಾರೆ.

‘‘ಈ ಶಿಬಿರದಲ್ಲಿ ಸರಕಾರಿ ಶಸ್ತ್ರಚಿಕಿತ್ಸಾ ತಜ್ಞ ಒಟ್ಟು 101 ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಆರೋಗ್ಯ ಸಹಜ ಸ್ಥಿತಿಯಲ್ಲಿದೆ. ಆದರೆ, ಸರಕಾರದ ಮಾರ್ಗಸೂಚಿ ಅನ್ವಯ ಓರ್ವ ಶಸ್ತ್ರಚಿಕಿತ್ಸಾ ತಜ್ಞ ದಿನವೊಂದಕ್ಕೆ ಗರಿಷ್ಠ 30 ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದು. ಆದುದರಿಂದ ಮಾರ್ಗಸೂಚಿಗಳನ್ನು ಯಾಕೆ ಉಲ್ಲಂಘಿಸಲಾಯಿತು ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ’’ ಎಂದು ಶುಕ್ಲಾ ಹೇಳಿದ್ದಾರೆ.

ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಆಗಮಿಸಿದ್ದರು.‘‘ ತಾವು ಕುಗ್ರಾಮದಿಂದ ಆಗಮಿಸಿದ್ದೇವೆ. ಆಗಾಗ ಬರಲು ಸಾಧ್ಯವಾಗುವುದಿಲ್ಲ. ಆದುದರಿಂದ ಇಂದೇ ಶಸ್ತ್ರಚಿಕಿತ್ಸೆ ನಡೆಸಿ ಎಂದು ಅವರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಾನು ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಶಸ್ತ್ರಚಿಕಿತ್ಸಾ ತಜ್ಞ ಸಮರ್ಥನೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಕ ಡಾ. ಜಿಬ್ನಸ್ ಎಕ್ಕಾ ಹಾಗೂ ಬ್ಲಾಕ್ ವೈದ್ಯಕೀಯ ಅಧಿಕಾರಿ (ಬಿಎಂಒ) ಡಾ. ಆರ್.ಎಸ್. ಸಿಂಗ್ ವಿರುದ್ಧ ಸುರುಗುಜದ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ (ಸಿಎಂಎಚ್ಒ) ಪಿ.ಎಸ್. ಸಿಸೋಡಿಯಾ ಆಗಸ್ಟ್ 29ರಂದು ಶೋಕಾಸ್ ನೋಟಿಸು ಜಾರಿಗೊಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ ಮೂವರು ಸದಸ್ಯರ ಸಮಿತಿಯನ್ನು ಕೂಡ ರೂಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News