ಕೈಮುಗಿದು ಕ್ಷಮೆ ಕೇಳುವವರೆಗೆ ಜಾವೇದ್‌ ಅಖ್ತರ್‌ ಸಿನಿಮಾಗಳನ್ನು ಪ್ರದರ್ಶಿಸಲು ಬಿಡುವುದಿಲ್ಲ: ಬಿಜೆಪಿ ನಾಯಕ

Update: 2021-09-05 10:10 GMT

ಹೊಸದಿಲ್ಲಿ: ಖ್ಯಾತ ಸಾಹಿತಿ ಹಾಗೂ ಚಿತ್ರ ಕಥೆಗಾರ ಜಾವೇದ್‌ ಅಕ್ತರ್‌ ರವರು ಬಲಪಂಥೀಯ ಸಂಘಟನೆಗಳನ್ನು ಹಾಗೂ ತಾಲಿಬಾನ್‌ ಗಳ ನಡುವೆ ಹೋಲಿಕೆ ಮಾಡಿದ್ದು, ಈ ವಿಚಾರ ಸದ್ಯ ವಿವಾದಕ್ಕೀಡಾಗಿದೆ. ಜಾವೇದ್‌ ಅಖ್ತರ್‌ ರವರು ಕೈಮುಗಿದು ಕ್ಷಮೆ ಯಾಚಿಸುವವರೆಗೂ ಅವರ ಯಾವುದೇ ಸಿನಿಮಾಗಳನ್ನು ಭಾರತದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ರಾಮ್‌ ಕದಂ ಹೇಳಿಕೆ ನೀಡಿದ್ದಾರೆ. 

ಟ್ವಿಟರ್‌ ನಲ್ಲಿ ವೀಡಿಯೊ ಪ್ರಕಟಿಸಿದ ಅವರು, "ಸಂಘಪರಿವಾರದೊಂದಿಗೆ ಸಂಪರ್ಕವಿರುವವರೇ ದೇಶವನ್ನು ಆಳುತ್ತಿದ್ದಾರೆ. ಒಂದು ವೇಳೆ ತಾಲಿಬಾನ್‌ ಸಿದ್ಧಾಂತ ಇಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೆ ಅವರಿಗೆ ಅಂತಹಾ ಹೇಳಿಕೆಗಳು ನೀಡಲು ಸಾಧ್ಯವೇ? ಈ ಪ್ರಶ್ನೆಗಿರುವ ಉತ್ತರವೇ ಅವರ ಟೀಕೆಗಳು ಎಷ್ಟು ಪೊಳ್ಳಾಗಿದೆ ಎನ್ನುವುದನ್ನು ತೋರಿಸುತ್ತದೆ" ಎಂದು ಕದಂ ಹೇಳಿದ್ದಾರೆ.

""ಅವರು ಸಂಘದ ಸದಸ್ಯರಿಗೆ ಕೈಮುಗಿದು ಕ್ಷಮೆಯಾಚಿಸುವವರೆಗೂ, ಅವರ ಯಾವುದೇ ಚಲನಚಿತ್ರವನ್ನು ಭಾರತ ಮಾತೆಯ ಭೂಮಿಯಲ್ಲಿ ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ" ಎಂದು ಕದಂ ಹೇಳಿದರು.

ವಿಹೆಚ್‌ಪಿ ಮತ್ತು ಆರೆಸ್ಸೆಸ್‌ ನ ಬೆಂಬಲಿಗರು ಆತ್ಮಾವಲೋಕನ ಮಾಡುವ ಸಮಯ ಬಂದಿದೆ ಎಂದು ಜಾವೇದ್‌ ಅಖ್ತರ್‌ ಎನ್ಡಿಟಿವಿಗೆ ತಿಳಿಸಿದ್ದರು. "ಆರೆಸ್ಸೆಸ್‌, ವಿಹೆಚ್‌ಪಿ ಅಥವಾ ಬಜರಂಗದಳದಂತಹ ಸಂಘಟನೆಗಳನ್ನು ಬೆಂಬಲಿಸುವ ಜನರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಸಹಜವಾಗಿ ತಾಲಿಬಾನ್‌ ಖಂಡನೀಯ. ಅವರು ಅನಾಗರಿಕರು. ಆದರೆ ನೀವು ಬೆಂಬಲಿಸುತ್ತಿರುವುದು ಯಾರನ್ನು? ಮತ್ತು ತಾಲಿಬಾನ್‌ ಗಳಿಂದ ಇವರು ಹೇಗೆ ಭಿನ್ನರಾಗಿದ್ದಾರೆ? ಎಂದು ಜಾವೇದ್‌ ಅಖ್ತರ್‌ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News