ದೇವಾಂಗ ಅಭಿವೃದ್ಧಿ ನಿಗಮ ಯಾಕಿಲ್ಲ?

Update: 2021-09-05 17:25 GMT

 ಮಾನ್ಯರೇ,

ರಾಜ್ಯದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಜಾತಿವಾರು ಹತ್ತಕ್ಕೂ ಹೆಚ್ಚು ನಿಗಮ ಮಂಡಳಿ ಪ್ರಾಧಿಕಾರಗಳನ್ನು ಸರಕಾರವು ಅಸ್ತಿತ್ವಕ್ಕೆ ತಂದಿರುವುದು ಶ್ಲಾಘನೀಯವೇ. ಈ ಜನಾಂಗದವರಿಗೆ ಸರಕಾರದ ಆರ್ಥಿಕ ಸವಲತ್ತು ಒದಗಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಈ ವ್ಯವಸ್ಥೆಯನ್ನು ತರಲಾಗಿದೆ. ಇದೇ ಮಾದರಿಯಲ್ಲಿ ಇತ್ತೀಚೆಗೆ ದೇವಾಂಗ ಸಮಾಜದ ಜನಾಂಗದವರಿಗೂ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಸರಕಾರಕ್ಕೆ ಸಮಾಜದ ಧರ್ಮಪೀಠ ದೇವಾಂಗ ರಾಜ್ಯ ಸಂಘ ಜಿಲ್ಲಾ ಮಟ್ಟಗಳಿಂದ ಮತ್ತು ಗ್ರಾಮ ಹಂತಗಳಿಂದಲೂ ಅನೇಕ ಮನವಿಗಳನ್ನು ಸಲ್ಲಿಸಲಾಗಿತ್ತು. ಕಳೆದ ಬಜೆಟ್ ಅವಧಿಯಲ್ಲಿ ಒಕ್ಕಲಿಗ ಸಮಾಜದವರಿಗೆ ಪ್ರಾಧಿಕಾರ ಘೋಷಣೆಯಾದ ಸಂದರ್ಭದಲ್ಲಿಯೇ ದೇವಾಂಗ ಅಭಿವೃದ್ಧಿ ನಿಗಮವೂ ಘೋಷಣೆಯಾಗುವ ನಿರೀಕ್ಷೆಯಿತ್ತು. ಆದರೆ ಹಾಗಾಗಲಿಲ್ಲ. ದೇವಾಂಗ ಜನಾಂಗದವರ ಕುಲಕಸುಬು ನೇಕಾರಿಕೆಯಾದರೂ ಇಂದಿನ ಜೀವನಶೈಲಿಗಳಲ್ಲಿ ಕುಲವೃತ್ತಿಯೊಂದಿಗೆ ಇತರ ವೃತ್ತಿಗಳನ್ನು ಅವಲಂಬಿಸಿರುವ ಅನಿವಾರ್ಯತೆ ಇದೆ. ಈ ಜನಾಂಗದ ಜನಸಂಖ್ಯೆ ಅಂದಾಜು ಮೂವತ್ತು ಲಕ್ಷದಷ್ಟು ಇದ್ದು ಇವರಲ್ಲಿ ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದ್ದಾರೆ. ರಾಜಕೀಯ ಪ್ರಾತಿನಿಧ್ಯವೂ ಕಡಿಮೆ. ಈ ಜನಾಂಗದವರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಸರಕಾರವು ದೇವಾಂಗ ಜನಾಂಗದವರಿಗೂ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದು ಸಮಂಜಸವಾಗಿದೆ. ಆಂಧ್ರ ಪ್ರದೇಶ, ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ದೇವಾಂಗ ನಿಗಮಗಳನ್ನು ಅಲ್ಲಿನ ಸರಕಾರಗಳು ಜಾರಿಗೆ ತಂದಿವೆ. ನಮ್ಮ ರಾಜ್ಯದಲ್ಲಿಯೂ ನಿಗಮ ಸ್ಥಾಪನೆಯಾದರೆ ಈ ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿ, ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಅವಕಾಶ, ಬಡಕುಟುಂಬಗಳ, ಬೀದಿ ವ್ಯಾಪಾರಿಗಳಿಗೆ ಧನಸಹಾಯವನ್ನು ನಿಗಮದ ಮೂಲಕ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ.

Writer - ಜಿ.ಎಚ್ .ಸಂಕಪ್ಪ, ಬೆಂಗಳೂರು

contributor

Editor - ಜಿ.ಎಚ್ .ಸಂಕಪ್ಪ, ಬೆಂಗಳೂರು

contributor

Similar News