ಆದಿತ್ಯನಾಥ್ ಸರಕಾರ 'ರಕ್ತ ಹೀರುವ ರಾಕ್ಷಸ' ಎಂದ ಮಾಜಿ ರಾಜ್ಯಪಾಲ ಅಝೀಝ್ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ

Update: 2021-09-06 17:58 GMT

ಲಕ್ನೋ,ಸೆ.6: ಆದಿತ್ಯನಾಥ ಸರಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಕ್ಕಾಗಿ ಪೊಲೀಸರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಝೀಝ್ ಕುರೇಷಿ ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ. ಕುರೇಷಿ ರಾಜ್ಯದಲ್ಲಿಯ ಬಿಜೆಪಿ ಸರಕಾರವನ್ನು ‘ರಕ್ತ ಹೀರುವ ರಾಕ್ಷಸ ’ಎಂದು ಬಣ್ಣಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.

ವರದಿಗಳನ್ವಯ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಮತ್ತು ಪತ್ನಿ ತಝೀನ್ ಖಾನ್ ಅವರನ್ನು ಭೇಟಿಯಾಗಲೆಂದು ಕುರೇಷಿ ಅವರ ನಿವಾಸಕ್ಕೆ ತೆರಳಿದ್ದು,ಭೇಟಿಯ ಬಳಿಕ ಖಾನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಈ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು.

ಬಿಜೆಪಿ ನಾಯಕ ಆಕಾಶ ಕುಮಾರ ಸಕ್ಸೇನಾ ನೀಡಿರುವ ದೂರಿನ ಮೇರೆಗೆ ರವಿವಾರ ರಾಮಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಕುರೇಷಿ ವಿರುದ್ಧ ಪ್ರಕರಣ ದಾಖಲಾಗಿದೆ. ಕುರೇಷಿಯವರ ಹೇಳಿಕೆ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಬಹುದು ಮತ್ತು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಸಕ್ಸೇನಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ವಿವಿಧ ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದ ಕುರೇಷಿಯವರ ಹೇಳಿಕೆಯನ್ನೊಳಗೊಂಡಿರುವ ಪೆನ್ ಡ್ರೈವ್ ಅನ್ನೂ ಸಕ್ಸೇನಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕುರೇಷಿ (81) 2014ರಿಂದ 2015ರವರೆಗೆ ಮಿಝೋರಾಮ್ ರಾಜ್ಯಪಾಲರಾಗಿದ್ದರು. ಅವರು ಕೆಲ ಸಮಯ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಅಧಿಕಾರವನ್ನು ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News