ಸಾಹಿತ್ಯದ ಉದ್ದೇಶವೇನು?

Update: 2021-09-06 18:34 GMT

ಇತ್ತೀಚೆಗೆ ದಿಲ್ಲಿ ವಿಶ್ವವಿದ್ಯಾನಿಲಯವು ಬಿಎ ಇಂಗ್ಲಿಷ್ (ಆನರ್ಸ್) ಪಠ್ಯಕ್ರಮದಿಂದ ಮಹಾಶ್ವೇತಾದೇವಿಯವರ ಪ್ರಸಿದ್ಧ ಸಣ್ಣಕಥೆ ‘ದ್ರೌಪದಿ’ ಮತ್ತು ಇಬ್ಬರು ದಲಿತ ಲೇಖಕಿಯರಾದ ಬಾಮಾ ಮತ್ತು ಸುಕೀರ್ತರಾಣಿಯವರ ಕೃತಿಗಳನ್ನೂ ಕಿತ್ತುಹಾಕಿತು. ಹಲವು ಲೇಖಕರು, ಶಿಕ್ಷಣ ತಜ್ಞರು ಹಾಗೂ ಮೀಡಿಯಾ ವ್ಯಕ್ತಿಗಳು ಈ ಕ್ರಮವನ್ನು ವಿರೋಧಿಸಿದರು. ಮಹಾಶ್ವೇತಾದೇವಿಯವರ ಸಣ್ಣಕಥೆ ಆದಿವಾಸಿಗಳ ಸ್ಥಿತಿಯ ವಿವರಗಳನ್ನು ದಾಖಲಿಸುತ್ತಾ ಇಂದಿಗೂ ಪ್ರಸ್ತುತವಾಗಿದೆ. ಬಾಮಾರವರ ‘ಕರುಕ್ಕು’ ಅವರ ಜೀವನದಲ್ಲಿ ಅವರು ಪಟ್ಟ ಪಾಡನ್ನು, ಪರಾಧೀನತೆಯನ್ನು ಕಟ್ಟಿಕೊಡುತ್ತದೆ. ಸುಕೀರ್ತರಾಣಿ ಅವರ ಕವನಗಳು ದಲಿತ ಸ್ತ್ರೀವಾದದ ರಾಜಕಾರಣವನ್ನು ತೆರೆದಿಡುತ್ತವೆ. ಸಮಕಾಲೀನ ಭಾರತದಲ್ಲಿ ಸಾಹಿತ್ಯದ ಯಾವುದೇ ವಿದ್ಯಾರ್ಥಿ ಕೇಳಿಸಿಕೊಳ್ಳಲೇ ಬೇಕಾದ ಪ್ರಮುಖ ಧ್ವನಿಗಳಿವು...

ಈ ಹಿನ್ನೆಲೆಯಲ್ಲಿ, ನಾವು ಕೇಳಲೇಬೇಕಾದ ಪ್ರಶ್ನೆ: ಒಂದು ತರಗತಿ ಕೋಣೆಯ ವಾಸ್ತವದಲ್ಲಿ ಸಾಹಿತ್ಯದ ಉದ್ದೇಶವೇನು? ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ವಿಶ್ಲೇಷಣೆಯನ್ನಷ್ಟೇ ಕಲಿಸುವ ಹಂತದಿಂದ ಸಾಹಿತ್ಯಕ ಅಧ್ಯಯನಗಳು ಬಹಳ ದೂರ ಸಾಗಿ ಬಂದಿವೆ. ಈಗ ಸಾಹಿತ್ಯದ ಅಧ್ಯಯನ ಕಥಾವಸ್ತುವಿನ ವಿಶ್ಲೇಷಣೆ, ಪಾತ್ರ ರಚನೆ ಹಾಗೂ ಪರೀಕ್ಷೆಯಲ್ಲಿ ದೀರ್ಘವಾದ ನೀರಸ ಉತ್ತರವನ್ನು ಬರೆಯುವಷ್ಟಕ್ಕೇ ಸೀಮಿತವಾಗಿ ಉಳಿದಿಲ್ಲ. ಪಠ್ಯವೊಂದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಇವುಗಳು ಖಂಡಿತವಾಗಿಯೂ ಮುಖ್ಯ ಹೌದು. ಆದರೆ ನಾವು ಎಲ್ಲಿ ಮತ್ತು ಹೇಗೆ ಬದುಕುತ್ತಿದ್ದೇವೆ ಮತ್ತು ನಮ್ಮ ಕಾಲ ಹಾಗೂ ಸಮಾಜ ಯಾವ ಸವಾಲುಗಳನ್ನು ಎದುರಿಸುತ್ತಿವೆ? ಎಂಬುದಕ್ಕೆ ನಮ್ಮನ್ನು ಪರಿಚಯಿಸುವುದು ಕೂಡ ಸಾಹಿತ್ಯದ ಉದ್ದೇಶ. ಹಲವು ವಿಧಗಳಲ್ಲಿ, ಸಾಹಿತ್ಯ ಎಂಬುದು ನಾವು ಯಾರು? ಅಥವಾ ಮನುಷ್ಯರಾಗಿ ನಾವೇನಾಗಬೇಕು? ಎಂಬುದಕ್ಕೆ ನಮ್ಮನ್ನು ಪರಿಚಯ ಮಾಡಿಸುವ ಒಂದು ವಿಷಯ. ವಿಶ್ವಾದ್ಯಂತ ಎಲ್ಲವನ್ನೂ, ಎಲ್ಲರನ್ನೂ ಮತ್ತು ವಿವಿಧತೆಯನ್ನು ಒಳಗೊಳ್ಳುವಂತೆ ಸಾಹಿತ್ಯದ ಪಠ್ಯಕ್ರಮಗಳನ್ನು ಪುನರ್‌ವಿನ್ಯಾಸಗೊಳಿಸಲಾಗುತ್ತಿದೆ.

 ಈಗ ಬಿಎ (ಆನರ್ಸ್) ಕೋರ್ಸ್‌ನಿಂದ ಕೈಬಿಡಲಾಗಿರುವ ಲೇಖಕರ ಕೃತಿಗಳು ಸಾಂಪ್ರದಾಯಿಕ ಸಾಹಿತ್ಯಿಕ ವಿಶ್ಲೇಷಣೆಗೂ ವಸ್ತುವಾಗುತ್ತವೆ. ಅದೇ ವೇಳೆ ಅವುಗಳು ಇಂದು ಭಾರತೀಯ ಸಮಾಜವನ್ನು ಕಾಡುತ್ತಿರುವ ಹಲವು ವಿಷಯಗಳ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಕೂಡ ನೆರವಾಗುತ್ತವೆ. ನಾನು ಈ ರಾಷ್ಟ್ರದ ಹಲವಾರು ವಾಸ್ತವಗಳನ್ನು ಈ ಬರಹಗಳ ಮೂಲಕವೇ ಅರ್ಥ ಮಾಡಿಕೊಂಡಿದ್ದೇನೆ. ಈ ಲೇಖಕರ ಕೃತಿಗಳಿಂದ ನಾನು ಬಹಳಷ್ಟನ್ನು ಕಲಿತಿದ್ದೇನೆ. ಅದೇ ವೇಳೆ, ಅವರ ಕೃತಿಗಳಲ್ಲಿ ಬರುವ ಪಾತ್ರಗಳ ಜೀವನಗಾಥೆಯಲ್ಲಿ ಇತಿಹಾಸ ಕೂಡ ದಾಖಲಾಗಿದೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪಠ್ಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುವವರು ಪಠ್ಯಕ್ರಮವನ್ನು ಆಗಾಗ ಪರಿಷ್ಕರಿಸಬೇಕಾಗುತ್ತದೆ ಎಂದು ವಾದಿಸಬಹುದು. ಇದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೈಬಿಡಲಾದ ಪಠ್ಯಗಳ ಸ್ಥಾನಕ್ಕೆ ಬರುವ ಹೊಸ ಪಠ್ಯಗಳು ಇನ್ನಷ್ಟು ವಿಶ್ಲೇಷಣೆಗೆ ಒಗ್ಗುವಂತಹವುಗಳಾಗಿರಬೇಕು. ಇಲ್ಲಿ ಇನ್ನೂ ಒಂದು ಪ್ರಶ್ನೆ ಕೇಳಬೇಕಾಗುತ್ತದೆ: ಪಠ್ಯದಿಂದ ಕೈಬಿಡಲು ಈ ಮೂವರ ಕೃತಿಗಳನ್ನು ಮಾತ್ರ ಯಾಕೆ ಆಯ್ದುಕೊಳ್ಳಲಾಯಿತು? ಇವರನ್ನು ಪಠ್ಯಕ್ರಮದಿಂದ ಹೊರಗಿಡುವ ಕ್ರಮವೇ ಹಲವರನ್ನು ಇವರ ಕೃತಿಗಳನ್ನು ಓದುವಂತೆ ಪ್ರೇರೇಪಿಸ ಬಹುದು. ಎ.ಕೆ. ರಾಮಾನುಜನ್‌ರವರ ‘ಟ್ರೀ ಹಂಡ್ರೆಡ್ ರಾಮಾಯಣಾಸ್’ ಮತ್ತು ರೊಹಿಮ್‌ಟನ್ ಮಿಸ್ತ್ರಿ ಅವರ ‘ಎ ಫೈನ್ ಬ್ಯಾಲೆನ್ಸ್’ನಂತಹ ಕೃತಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ವಿಶ್ವವಿದ್ಯಾನಿಲಯದ ಪಠ್ಯಕ್ರಮದಿಂದ ಕೈಬಿಟ್ಟಾಗ ಈ ಹಿಂದೆ ಕೂಡ ಹೀಗೆಯೇ ಆಗಿತ್ತು. ನಿಷೇಧಿತ ಕೃತಿಗಳು ಓದುಗರಲ್ಲಿ ಭಾರೀ ಕುತೂಹಲ ಹುಟ್ಟಿಸುತ್ತವೆಂದು ಬೇರೆ ಹೇಳಬೇಕಾಗಿಲ್ಲ.

ದಿಲ್ಲಿ ವಿಶ್ವವಿದ್ಯಾನಿಲಯವು ಮಹಾಶ್ವೇತಾದೇವಿ ಹಾಗೂ ಬಾಮಾರವರ ಕೃತಿಗಳನ್ನು ಇಂಗ್ಲಿಷ್ ಪಠ್ಯಕ್ರಮದ ಭಾಗವಾಗಿ ಸೇರ್ಪಡೆಗೊಳಿಸಲು ನಿರ್ಧರಿಸಿದ್ದು ಒಂದು ಸ್ವಾಗತಾರ್ಹ ಕ್ರಮವಾಗಿತ್ತು. ಭಾರತೀಯ ಸಾಹಿತ್ಯವನ್ನು ಭಾಷಾಂತರ ದಲ್ಲಿ ಓದುವುದು ದೇಶವನ್ನು ಹಾಗೂ ಅದರ ಸಮೃದ್ಧ ಸಾಹಿತ್ಯ ಸಂಪತ್ತನ್ನು ಪರಿಚಯಿಸಿಕೊಳ್ಳಲು ಇರುವ ಅತ್ಯುತ್ತಮ ವಿಧಾನಗಳಲ್ಲಿ ಒಂದು. ಇಂತಹ ಒಂದು ಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಿತ ವಾತಾವರಣವೊಂದರಲ್ಲಿ ಸಾಹಿತ್ಯವನ್ನು ಓದಿ ಆಸ್ವಾದಿಸಲೂ ಹೇಳಿ ಕೊಡಬಹುದಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಆಧುನಿಕ ಜಗತ್ತಿನ ಆಗುಹೋಗುಗಳನ್ನು, ವಾಸ್ತವಗಳನ್ನು ಅರಿತ ನಾಗರಿಕರಾಗುವಂತೆ ಮಾಡಬಹುದಾಗಿದೆ. ವಿಶ್ವಸಾಹಿತ್ಯಕ್ಕೆ ಅದರದ್ದೇ ಆದ ಮಹತ್ವವಿದೆ ನಿಜ. ಆದರೆ ಭಾರತೀಯ ಕೃತಿಗಳ, ವಿಶೇಷವಾಗಿ ನಾವು ಯು. ಆರ್. ಅನಂತಮೂರ್ತಿ ಹೇಳುವ ಹಾಗೆ ‘ಕ್ರಿಟಿಕಲ್ ಇನ್‌ಸೈಡರ್’ ಆಗಲು ನೆರವಾಗುವ ಭಾರತೀಯ ಸಾಹಿತ್ಯದ ಪರಿಚಯ ನಿಜವಾದ ಸಾಹಿತ್ಯದ ಓದುಗರನ್ನು ಸೃಷ್ಟಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ತೀವ್ರತರ ಆಸಕ್ತಿಯಿಂದ ಓದುವವರನ್ನು ಸೃಷ್ಟಿಸುತ್ತದೆ. ಶಿಕ್ಷಣದ ಉದ್ದೇಶ ಕೂಡ ಇದೇ ತಾನೆ?

 ಕೃಪೆ: TheHindu
(ಲೇಖಕರು ಪೂನಾದ ಫ್ಲೇಮ್ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)

Writer - ಕುನಾಲ್ ರೇ

contributor

Editor - ಕುನಾಲ್ ರೇ

contributor

Similar News