ಹೆಚ್ಚಳಗೊಳ್ಳುತ್ತಿರುವ ಹೇರಿಕೆಗಳು ಎದ್ದು ನಿಲ್ಲದ ಮಧ್ಯಮ ವರ್ಗ!

Update: 2021-09-07 09:23 GMT
 ನಂದಕುಮಾರ್ ಕೆ. ಎನ್.

ಈಗ ಜಾಗತೀಕರಣಕ್ಕೆ ಮೂರು ದಶಕಗಳಾಗಿವೆ. ಈ ಸಂದರ್ಭದಲ್ಲಿ ಜಾಗತಿಕ ಬಂಡವಾಳಶಾಹಿ ಚೇತರಿಸಿಕೊಂಡು ಸ್ಥಿರತೆಯತ್ತ ಸಾಗಲು ಸಾಧ್ಯವಾಗದೆ ಮತ್ತಷ್ಟು ಕುಸಿತದತ್ತಲೇ ಸಾಗುತ್ತಿದೆ. ಜಾಗತೀಕರಣದ ಮೊದಲ ದಶಕದ ಕೊನೆಯ ವೇಳೆಗೆ ಸುಮಾರು ಒಟ್ಟು ಜನಸಂಖ್ಯೆಯ ಶೇಕಡಾ 30ರಷ್ಟು ಮಧ್ಯಮ ವರ್ಗದ ಜನಸಂಖ್ಯೆ ತಲುಪಿತ್ತು. ಆನಂತರ ಕೂಡ ದೊಡ್ಡ ಪ್ರಮಾಣದ ಹೆಚ್ಚಳವಾಗುತ್ತಾ ಒಂದು ಅಂದಾಜಿನ ಪ್ರಕಾರ ಒಟ್ಟು 2016ರ ವೇಳೆಗೆ ಇದು ಜನಸಂಖ್ಯೆಯ ಶೇಕಡಾ 40ರಷ್ಟಕ್ಕೆ ಮುಟ್ಟಿತ್ತು. ಈಗ ಜಾಗತೀಕರಣ ನೀತಿಯ ಹೊಡೆತಗಳ ಕಾರಣದಿಂದಾಗಿ ಭಾರತದ ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಭಾರೀ ಇಳಿಕೆ ಕಾಣತೊಡಗಿದೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ತೀವ್ರಗತಿಯಲ್ಲಿ ಕಾಣುತ್ತಿದೆ. ಇದಕ್ಕೆ ಕೊರೋನ ಒಂದು ನೆಪ ಮಾತ್ರವಾಗಿದೆ.

ಇದೇ 2021ರ ಆಗಸ್ಟ್‌ನ ಒಂದು ತಿಂಗಳ ಅವಧಿಯಲ್ಲೇ ಭಾರತದ ಸುಮಾರು ಹದಿನೈದು ಲಕ್ಷ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ (CMIE) ಹೊರಬಿಟ್ಟಿದೆ. ನಗರ ನಿರುದ್ಯೋಗ ಮಟ್ಟ ಶೇ 9.78, ಗ್ರಾಮೀಣ ನಿರುದ್ಯೋಗಮಟ್ಟ ಶೇ. 7.64ಕ್ಕೆ ಏರಿದೆ ಎಂದು ಆ ವರದಿ ಹೇಳಿದೆ. ಕೊರೋನ ಲಾಕ್‌ಡೌನ್‌ನ ನಂತರ ಭಾರತದಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳು ಭಾರೀ ಕುಸಿತಕ್ಕೊಳಗಾಗಿ ಕೋಟ್ಯಂತರ ಉದ್ಯೋಗಗಳು ನಷ್ಟವಾಗುತ್ತಾ ಸಾಗುತ್ತಿವೆ. ಲಕ್ಷಾಂತರ ಕುಟುಂಬಗಳು ತಮ್ಮ ಬದುಕಿನ ಆದಾಯಗಳನ್ನು ಕಳೆದುಕೊಂಡಿದ್ದಲ್ಲದೇ ತಮ್ಮ ಜೀವಮಾನದ ಉಳಿತಾಯಗಳನ್ನು ಕೂಡ ಕಳೆದುಕೊಂಡು ತೀವ್ರ ಆತಂಕ ಹಾಗೂ ಅಭದ್ರತೆಗಳಿಗೆ ಬಲಿಯಾಗುತ್ತಾ ಸಾಗಿವೆ. ಈ ಬಗೆಗಿನ ಸರಿಯಾದ ಅಂಕಿ-ಅಂಶಗಳು ಸಿಗದಂತಹ ಪರಿಸ್ಥಿತಿ ಇದೆ. ಯಾಕೆಂದರೆ ಇದರ ನಿಖರ ಮಾಹಿತಿಗಳ ಸಂಗ್ರಹಕಾರ್ಯ ನಡೆಯುತ್ತಿಲ್ಲ. ಅಲ್ಲದೆ ಈಗ ಸರಕಾರಿ ಅಂಕಿಅಂಶಗಳೂ ಕೂಡ ಬಿಡುಗಡೆ ಮಾಡದಂತೆ ತಡೆಹಿಡಿಯಲಾಗುತ್ತಿದೆ. ಜಾಗತಿಕ ಆರ್ಥಿಕ ಸಂಸ್ಥೆಗಳು ಈಗಾಗಲೇ ಭಾರತವನ್ನು ಅಭಿವೃದ್ಧಿಶೀಲ ದೇಶಗಳ ಪಟ್ಟಿಯಿಂದ ಹೊರಗಿಟ್ಟಿವೆ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಹಿಂದೆಂದೂ ಕಾಣದಷ್ಟು ಕುಸಿತ ಕಂಡು ಅದು ನಕಾರಾತ್ಮಕ ಬೆಳವಣಿಗೆಯಲ್ಲಿ ಸಾಗತೊಡಗಿದೆ ಎಂದು ಈ ಸಂಸ್ಥೆಗಳು ಹೇಳಿವೆ. ಅದೇ ವೇಳೆಯಲ್ಲಿ ನೆರೆಯ ಬಾಂಗ್ಲಾ ದೇಶ, ಪಾಕಿಸ್ತಾನ, ನೇಪಾಳದಂತಹ ಬಡರಾಷ್ಟ್ರಗಳು ಸಕಾರಾತ್ಮಕ ಬೆಳವಣಿಗೆ ದರಗಳನ್ನು ದಾಖಲಿಸುತ್ತಿವೆ. ಅದರಲ್ಲೂ ಬಾಂಗ್ಲಾ ದೇಶ ಎರಡಂಕಿಯ ಬೆಳವಣಿಗೆಗಳನ್ನು ದಾಖಲಿಸುತ್ತಾ ಸಾಗಿದೆ.

ಇತ್ತೀಚೆಗೆ ಮಧ್ಯಮ ವರ್ಗಗಳ ಜನಸಂಖ್ಯೆಯಲ್ಲಿ ಜಾಗತಿಕವಾಗಿ ಭಾರೀ ಇಳಿಕೆ ಕಾಣತೊಡಗಿದೆ ಎಂಬ ಸುದ್ದಿಗಳು ಹೆಚ್ಚು ಪ್ರಾಮುಖ್ಯತೆ ಪಡೆಯತೊಡಗಿವೆ. ಅದರಲ್ಲೂ ಕೊರೋನ ನಂತರದಲ್ಲಿ ಮಧ್ಯಮವರ್ಗವು ಹೆಚ್ಚಿನ ಮಟ್ಟದಲ್ಲಿ ಬಡವರ್ಗವಾಗಿರುವ ಸುದ್ದಿಗಳು ಹೆಚ್ಚಾಗತೊಡಗಿವೆ. ಜಾಗತೀಕರಣ ಶುರುವಾಗಿ ಜಗತ್ತನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಧ್ಯಮವರ್ಗಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವ, ಕೆಲವು ಕಡೆಗಳಲ್ಲಿ ಎರಡು ಪಟ್ಟು ಹೆಚ್ಚಾಗಿರುವ ಸುದ್ದಿಗಳು ಬರುತ್ತಿದ್ದವು. ಮಧ್ಯಮ ವರ್ಗದ ಹೆಚ್ಚಳ ಎನ್ನುವುದನ್ನು ಬಡತನ ನಿರ್ಮೂಲನೆ ಹಾಗೂ ಅಭಿವೃದ್ಧಿಯ ಭಾಗವೆಂಬತೆ ಸರಕಾರಗಳು ಪ್ರಚುರಪಡಿಸುತ್ತಿದ್ದವು. ಆದರೆ ಮಧ್ಯಮ ವರ್ಗಗಳ ಕುರಿತಾದ ಮಾನದಂಡಗಳು ವೈಜ್ಞಾನಿಕವಾಗಿ ನಿರ್ಧರಿಸಲಾಗಿವೆಯೇ ಎಂದರೆ ಸಮಾಧಾನಕರವಾದ ಉತ್ತರಗಳು ಯಾರಿಗೂ ಸಿಗಲಾರದು. ಕೆಲವು ಲೆಕ್ಕಾಚಾರಗಳಂತೂ ಹಾಸ್ಯಾಸ್ಪದ ಎನ್ನುವಂತಹವುಗಳಾಗಿದ್ದವು. ಮಧ್ಯಮ ವರ್ಗವೆಂದರೆ ಬಡತನ ರೇಖೆಯ ಮೇಲಿರುವವರು ಶ್ರೀಮಂತರಿಗಿಂತ ಕೆಳಗಿರುವವರು ಎಂದಾಗಿದೆ. ಯುಪಿಎ ಆಡಳಿತಾವಧಿಯಲ್ಲಿ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಯೋಜನಾ ಆಯೋಗ ನಗರ ಪ್ರದೇಶಗಳಲ್ಲಿ ದಿನಕ್ಕೆ 32 ರೂಪಾಯಿಗಳನ್ನು ಗಳಿಸುವವರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 28 ರೂಪಾಯಿಗಳನ್ನು ಗಳಿಸುವವರು ಬಡತನ ರೇಖೆಗಿಂತ ಮೇಲಿನವರ ಸಾಲಿಗೆ ಸೇರುತ್ತಾರೆ ಎಂಬಂತಹ ಹಾಸ್ಯಾಸ್ಪದ ಮಾನದಂಡ ರೂಪಿಸಿದ್ದನ್ನು ನಾವಿಲ್ಲಿ ಗಮನಿಸಬಹುದು.

ಭಾರತದಲ್ಲಿ ಮಧ್ಯಮ ವರ್ಗಗಳಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳಲ್ಲಿ ನಿಗದಿತ ಸಂಬಳಕ್ಕೆ ದುಡಿಯುತ್ತಿರುವವರು, ಸರಕಾರಿ ನೌಕರರು, ಖಾಸಗಿ ಕ್ಷೇತ್ರದ ನೌಕರರು, ಕಾರ್ಮಿಕರು, ಗ್ರಾಮೀಣ ಪ್ರದೇಶದ ಭೂಹಿಡುವಳಿದಾರರು, ಸೇವೆ, ವ್ವವಹಾರ, ವ್ಯಾಪಾರ ಕ್ಷೇತ್ರದವರು ಹೀಗೆ ಹಲವರು ಸೇರುತ್ತಾರೆ. ನಮ್ಮ ದೇಶದ ಸಂದರ್ಭದಲ್ಲಿ ಮಧ್ಯಮ ವರ್ಗವನ್ನು ಕೆಳಮಧ್ಯಮ, ನಡುಮಧ್ಯಮ ವರ್ಗ, ಮೇಲ್‌ಮಧ್ಯಮ ವರ್ಗ ಎಂದು ವಿಂಗಡಿಸಿ ನೋಡಬೇಕಾಗುತ್ತದೆ. ಮಧ್ಯಮ ವರ್ಗವೆಂದಾಗ ಕೇವಲ ಆರ್ಥಿಕ ಮಾನದಂಡವಲ್ಲದೆ ಚಿಂತನೆ ಹಾಗೂ ಜೀವನ ಶೈಲಿಯನ್ನೂ ಕೂಡ ಪರಿಗಣಿಸಬೇಕಾಗುತ್ತದೆ. ಕೆಳ ಮಧ್ಯಮವರ್ಗ ನಿಗದಿತ ಆದಾಯವನ್ನು ಹೊಂದಿ ತಮ್ಮ ಆಹಾರ, ಬಟ್ಟೆ, ವಸತಿ, ಶಿಕ್ಷಣಗಳಂತಹ ಮೂಲಭೂತ ಅಗತ್ಯಗಳನ್ನು ಕಷ್ಟದಿಂದ ಪೂರೈಸಿಕೊಳ್ಳುತ್ತಿರುತ್ತಾರೆ. ಸ್ವಂತ ಮನೆ ಇಲ್ಲವೇ ಹೇಳಿಕೊಳ್ಳುವಂತಹ ಆಸ್ತಿ, ದೊಡ್ಡ ಮಟ್ಟದ ಉಳಿತಾಯವೇನೂ ಇರುವುದಿಲ್ಲ. ಇವರಲ್ಲಿ ಬಹುತೇಕರು ಆರ್ಥಿಕವಾಗಿ ಬಡತನದ ಸನಿಹದಲ್ಲಿ ಇರುತ್ತಾರೆ. ಬದುಕು ನಡೆಸಲು ಹೆಚ್ಚು ಖಾಸಗಿ ಸಾಲಗಾರರಾಗಿರುತ್ತಾರೆ. ಕೆಳ ಹಂತದ ಸರಕಾರಿ ನೌಕರರು, ಖಾಸಗಿ ಕ್ಷೇತ್ರದ ಕೆಳಹಂತದ ನೌಕರರು, ಮೆಕಾನಿಕ್‌ಗಳು, ವೆಲ್ಡರುಗಳಂತಹವರು, ಅಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ರಿಕ್ಷಾ/ಟ್ಯಾಕ್ಸಿ ಚಾಲಕರು, ಸಣ್ಣಪುಟ್ಟ ಗುತ್ತಿಗೆದಾರರು, ಸಣ್ಣಪುಟ್ಟ ಅಂಗಡಿ ಮಾಲಕರು, ಸಣ್ಣ ಪುಟ್ಟ ವ್ಯಾಪಾರಿಗಳು ಮೊದಲಾದವರನ್ನು ಇದರಲ್ಲಿ ಸೇರಿಸಬಹುದು.

ನಡುಮಧ್ಯಮ ವರ್ಗ ಎಂದಾಗ ನಿಗದಿತ ಆದಾಯ ಹೊಂದಿ ಆಹಾರ, ಬಟ್ಟೆ ವಸತಿ, ಶಿಕ್ಷಣಗಳ ಜೊತೆಗೆ ಸ್ವಂತ ಮನೆ, ಮಧ್ಯಮ ಆಸ್ತಿ ಹೊಂದಿರುವವರು. ಸ್ವಂತ ನಾಲ್ಕು ಚಕ್ರದ ವಾಹನದ ಜೊತೆಗೆ ಹೇಳಬಹುದಾದ ಬ್ಯಾಂಕ್ ಉಳಿತಾಯಗಳನ್ನು ಹೊಂದಿರುವವರು ಸೇರುತ್ತಾರೆ. ತಾಲೂಕು ಮಟ್ಟದ ಸರಕಾರಿ ಅಧಿಕಾರಿಗಳು, ಕೆಳಹಂತದ ಖಾಸಗಿ ಕ್ಷೇತ್ರದ ಅಧಿಕಾರಿಗಳು, ಸಂಘಟಿತ ವಲಯದ ಕಾರ್ಮಿಕರು, ಭಾರೀ ವಾಹನಗಳ ಚಾಲಕರು, ಮಧ್ಯಮ ಗಾತ್ರದ ಕಾರ್ಖಾನೆ/ವ್ಯಾಪಾರಗಳ ಒಡೆಯರು, ತಮ್ಮ ಮೂಲಭೂತ ಅವಶ್ಯಕತೆಗಳಿಗಿಂತಲೂ ಹೆಚ್ಚಿನ ಆದಾಯವಿರುವ, ಸಾಕಷ್ಟು ಉಳಿತಾಯ ಹೊಂದಿರುವ, ಸ್ವಂತ ಮನೆ ಹಾಗೂ ಆಸ್ತಿ, ಐಷಾರಾಮಿ ವಾಹನಗಳ ಮಾಲಕರು ಮೊದಲಾದವರನ್ನು ಇದರಲ್ಲಿ ಸೇರಿಸಬಹುದು. ಮೇಲ್‌ಮಧ್ಯಮ ಎಂದಾಗ ಹೋಲಿಕೆಯಲ್ಲಿ ದೊಡ್ಡ ಮಟ್ಟದ ನಿಗದಿತ ವರಮಾನ, ಕೆಲವು ಕೋಟಿಗಳ ಆಸ್ತಿ, ಐಷಾರಾಮಿ ಮನೆ ಮತ್ತು ಐಷಾರಾಮಿ ವಾಹನಗಳ ಮಾಲಕರುಗಳು, ಕೋಟಿ ಲೆಕ್ಕದ ಉಳಿತಾಯಗಳನ್ನು ಹೊಂದಿರುವವರು ಮೊದಲಾದವರು ಇದರಲ್ಲಿ ಬರುತ್ತಾರೆ. ಇವರು ಶ್ರೀಮಂತರ ಮಟ್ಟದ ಸನಿಹದಲ್ಲಿ ಇರುತ್ತಾರೆ. ಇವರಲ್ಲಿ ಜಿಲ್ಲಾ/ರಾಜ್ಯ ಮಟ್ಟದ ಸರಕಾರಿ ಗೆಜೆಟೆಡ್ ಅಧಿಕಾರಿಗಳು, ಇಂಜಿನಿಯರುಗಳು, ಡಾಕ್ಟರುಗಳು, ಐಟಿ, ಬಿಟಿ ನೌಕರರಂತಹವರು, ಗ್ರಾಮೀಣ ಭೂ ಒಡೆಯರು ಮೊದಲಾದವರನ್ನು ಸೇರಿಸಬಹುದು.

ತಮ್ಮ ದೈನಂದಿನ ಜೀವನದ ಕನಿಷ್ಠ ಅವಶ್ಯಕತೆಗಳಿಗೂ ಕಷ್ಟ ಪಡುತ್ತಿರುವವರು ಉಳಿತಾಯವಾಗಲೀ, ಹೇಳಿಕೊಳ್ಳುವಂತಹ ಆಸ್ತಿ ಭೂಮಿಯಾಗಲೀ ಇಲ್ಲದವರು ಬಡ ವರ್ಗವೆಂದು ಪರಿಗಣಿಸಬಹುದು. ಇವರ ಬದುಕುಗಳಿಗೆ ಕನಿಷ್ಠ ಭದ್ರತೆ ಕೂಡ ಇರುವುದಿಲ್ಲ. ಶಿಕ್ಷಣ ಮಟ್ಟವೂ ಬಹಳ ಕಡಿಮೆ ಇರುತ್ತದೆ. ಆದಿವಾಸಿ ಜನಸಮುದಾಯಗಳು, ಮುಸ್ಲಿಮರಲ್ಲಿನ ಬಹುಸಂಖ್ಯಾತರು, ದಲಿತರಲ್ಲಿನ ಬಹುಸಂಖ್ಯಾತರು, ಗ್ರಾಮೀಣ ಬಡ ರೈತರು, ಗ್ರಾಮೀಣ ಕೃಷಿ ಕೂಲಿಗಳು, ನಗರದ ಕೂಲಿಗಳು, ಅಸಂಘಟಿತ ವಲಯದ ಕೆಳಹಂತದ ಕಾರ್ಮಿಕರು, ಬೀದಿ ಬದಿಯ ಪುಟ್ಟ ವ್ಯಾಪಾರ/ವ್ಯವಹಾರದವರು ಮೊದಲಾದವರನ್ನು ಬಡ ವರ್ಗವೆಂದು ಪರಿಗಣಿಸಬಹುದು. ಈ ವರ್ಗೀಕರಣ ಇಷ್ಟು ಸರಳವೂ ಅಲ್ಲ ಪರಿಪೂರ್ಣವೂ ಅಲ್ಲ. ಸದ್ಯಕ್ಕೆ ಒಂದು ಸಾಮಾನ್ಯ ಗ್ರಹಿಕೆಗಾಗಿ ಮಾತ್ರ ಇದನ್ನು ಪರಿಗಣಿಸಬಹುದು. ಜಾಗತೀಕರಣದ ನಂತರ ಮಧ್ಯಮವರ್ಗ ಅದರಲ್ಲೂ ನಗರ ಕೇಂದ್ರಿತ ನಡು ಹಾಗೂ ಮೇಲ್ ಮಧ್ಯಮ ವರ್ಗದ ಜನರಿಗೆ ಭಾರೀ ಅವಕಾಶಗಳನ್ನು ಬಿಂಬಿಸುತ್ತಾ ಬರಲಾಯಿತು. ಉಪಭೋಗಿ ವಸ್ತುಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಅವರ ಮನೆಗಳ ಭಾಗವಾಗತೊಡಗಿದವು. ಹಲವಾರು ಗ್ರಾಹಕ ಆಯ್ಕೆಗಳನ್ನು ಅವರ ಮುಂದೆ ತೆರೆದಿಡಲಾಯಿತು.

ಬ್ಯಾಂಕ್ ಸಾಲ ಸೌಲಭ್ಯಗಳು, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಅವರ ಕೈಗಳಿಗೆ ಎಟುಕುವಂತೆ ಮಾಡಲಾಯಿತು. ಇವೆಲ್ಲವುಗಳ ಮೂಲಕ ಅನುಭೋಗಿ ಸಂಸ್ಕೃತಿಯನ್ನು ಇವರ ಮಧ್ಯೆ ವ್ಯಾಪಕಗೊಳಿಸಲಾಯಿತು. ಉದ್ಯೋಗಾವಕಾಶಗಳ ಭಾರೀ ಭರವಸೆಗಳನ್ನು ಬಿತ್ತಲಾಯಿತು. ತೊಂಭತ್ತರ ದಶಕದ ಮಧ್ಯದ ವೇಳೆಗೆ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 1ರಷ್ಟಿದ್ದ ಬಿಲಿಯಾಧಿಪತಿಗಳ ಸಂಪತ್ತು 2008ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 22ಕ್ಕೆ ಏರುತ್ತದೆ. ಆಗ ಇದ್ದ ಒಟ್ಟು 46 ಬಿಲಿಯಾಧಿಪತಿಗಳಲ್ಲಿ 28 ಬಿಲಿಯಾಧೀಶರುಗಳು ಬನಿಯಾ (ಮಾರ್ವಾಡಿ), ಪಾರ್ಸಿ, ಸಿಂಧಿ ಸಮೂಹಗಳಿಗೆ ಸೇರಿದವರು. ಇತರರು ಬ್ರಾಹ್ಮಣ, ಖತ್ರಿ, ನಾಡಾರ್, ಜಾಟ್ ಮತ್ತು ರೆಡ್ಡಿ ಸಮೂಹಗಳ ಹಿನ್ನೆಲೆಯವರು. ಒಬ್ಬರು ಮಾತ್ರ ಮುಸ್ಲಿಂ ಸಮುದಾಯದ ಹಿನ್ನೆಲೆಯವರು. ಆದರೆ ಜಾಗತೀಕರಣದ ವಕ್ತಾರರು ಊದಿ ಬಿಟ್ಟ ರಂಗುರಂಗಿನ ಬಲೂನುಗಳು ಒಡೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಉದ್ಯೋಗಾವಕಾಶಗಳು ಕಡಿತಗೊಳ್ಳುತ್ತಾ, ಮಾಡಿದ ಸಾಲ ಕಟ್ಟಲಾಗದ ಪರಿಸ್ಥಿತಿಗಳು ಹೆಚ್ಚಾಗತೊಡಗಿದವು. ಐಟಿ-ಬಿಟಿ ಕುಸಿತ ಕಂಡವು. ಕೃಷಿಕರು ಆತ್ಮಹತ್ಯೆಗಳಿಗೆ ನೂಕಲ್ಪಟ್ಟರು, ಯುವಕರು ಆತ್ಮಹತ್ಯೆ, ಕಳ್ಳತನ ದರೋಡೆಗಳಿಗೆ ದೂಡಲ್ಪಟ್ಟರು. ಇದರಲ್ಲಿ ಐಟಿ-ಬಿಟಿ ಇಂಜಿನಿಯರುಗಳು ಸೇರಿದ್ದರು ಎನ್ನುವುದನ್ನು ಇಲ್ಲಿ ಗುರುತಿಸಬೇಕು.

ಅದೇ ವೇಳೆಯಲ್ಲಿ ಬಿಲಿಯಾಧೀಶರ ಸಂಪತ್ತಿನ ಕ್ರೋಡೀಕರಣ ಎಗ್ಗಿಲ್ಲದೆ ಸಾಗುತ್ತಲೇ ಬಂದಿದೆ. ಈಗ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ ಒಂದರಷ್ಟು ಇರುವ ಬಿಲಿಯಾಧೀಶರ ಕೈಯಲ್ಲಿ ದೇಶದ ಬಹುಪಾಲು ಆಸ್ತಿ ಸಂಪತ್ತು ಶೇಕರಣೆಗೊಳ್ಳುತ್ತಲೇ ಹೋಗುತ್ತಿರುವುದರ ವರದಿಗಳು ಬರುತ್ತಲೇ ಇವೆ.
ಅಂದರೆ ಜಾಗತೀಕರಣ ಆರಂಭವಾದ ತೊಂಭತ್ತರ ದಶಕದ ಅಂತ್ಯದ ವೇಳೆಗೆ ಭಾರೀ ಅಭಿವೃದ್ಧಿಯನ್ನು ಬಿಂಬಿಸಿದ್ದರೂ ವಾಸ್ತವದಲ್ಲಿ ಕುಸಿತದತ್ತ ಸಾಗತೊಡಗಿತು. ಆದರೆ ಜಿಡಿಪಿ ಅಭಿವೃದ್ಧಿ ದರ ಎರಡಂಕಿಯ ಏರಿಕೆಯಲ್ಲಿತ್ತು. ಅದೇ ವೇಳೆ ಜನಸಾಮಾನ್ಯರಲ್ಲಿ ದೊಡ್ಡ ಕ್ಷೋಭೆಯನ್ನು ಹುಟ್ಟುಹಾಕತೊಡಗಿತು. ಉದಾರೀಕರಣ, ಖಾಸಗೀಕರಣ, ವಿದೇಶಿ ನೇರ ಬಂಡವಾಳಗಳೇ ಅಭಿವೃದ್ಧಿಯ ಮಾನದಂಡಗಳನ್ನಾಗಿ ಬಿಂಬಿಸುವುದು ನಿಲ್ಲಲಿಲ್ಲ. ಅದಕ್ಕೆ ಪೂರಕವಾಗಿ ಮೊದಲಿನ ಕಾನೂನುಗಳ ಸಡಿಲಿಕೆಗಳು, ತಿದ್ದುಪಡಿಗಳು, ರದ್ದುಗಳು ಹೆಚ್ಚು ಮಾಡುತ್ತಾ, ದೇಶದ ಗಣಿ, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್, ವಿಮೆ, ಬ್ಯಾಂಕ್ ಮೊದಲಾದ ಸಾರ್ವಜನಿಕ ಕ್ಷೇತ್ರಗಳನ್ನು ಜಾಗತಿಕ ಬಂಡವಾಳಕ್ಕೆ ಮುಕ್ತಗೊಳಿಸುತ್ತಾ ಬರಲಾಯಿತು.

ಈಗ ಜಾಗತೀಕರಣಕ್ಕೆ ಮೂರು ದಶಕಗಳಾಗಿವೆ. ಈ ಸಂದರ್ಭದಲ್ಲಿ ಜಾಗತಿಕ ಬಂಡವಾಳಶಾಹಿ ಚೇತರಿಸಿಕೊಂಡು ಸ್ಥಿರತೆಯತ್ತ ಸಾಗಲು ಸಾಧ್ಯವಾಗದೆ ಮತ್ತಷ್ಟು ಕುಸಿತದತ್ತಲೇ ಸಾಗುತ್ತಿದೆ. ಜಾಗತೀಕರಣದ ಮೊದಲ ದಶಕದ ಕೊನೆಯ ವೇಳೆಗೆ ಸುಮಾರು ಒಟ್ಟು ಜನಸಂಖ್ಯೆಯ ಶೇಕಡಾ 30ರಷ್ಟು ಮಧ್ಯಮ ವರ್ಗದ ಜನಸಂಖ್ಯೆ ತಲುಪಿತ್ತು. ಆನಂತರ ಕೂಡ ದೊಡ್ಡ ಪ್ರಮಾಣದ ಹೆಚ್ಚಳವಾಗುತ್ತಾ ಒಂದು ಅಂದಾಜಿನ ಪ್ರಕಾರ ಒಟ್ಟು 2016ರ ವೇಳೆಗೆ ಇದು ಜನಸಂಖ್ಯೆಯ ಶೇಕಡಾ 40ರಷ್ಟಕ್ಕೆ ಮುಟ್ಟಿತ್ತು. ಈಗ ಜಾಗತೀಕರಣ ನೀತಿಯ ಹೊಡೆತಗಳ ಕಾರಣದಿಂದಾಗಿ ಭಾರತದ ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಭಾರೀ ಇಳಿಕೆ ಕಾಣತೊಡಗಿದೆ. ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ತೀವ್ರಗತಿಯಲ್ಲಿ ಕಾಣುತ್ತಿದೆ. ಇದಕ್ಕೆ ಕೊರೋನ ಒಂದು ನೆಪ ಮಾತ್ರವಾಗಿದೆ. ಕಳೆದ ವರ್ಷದಿಂದ ಇಲ್ಲಿಯವರೆಗೆ ಭಾರತದ ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಭಾರೀ ಇಳಿಕೆಗಳು ಕಾಣುತ್ತಾ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ಈ ಪ್ರಕ್ರಿಯೆಗಳು ಹೆಚ್ಚಿನ ತೀವ್ರತೆ ಪಡೆದದ್ದು ನೋಟು ರದ್ದತಿಯೊಂದಿಗೆ ಎಂದು ಹೇಳಬಹುದು. ನಂತರದ ಜಿಎಸ್‌ಟಿ ಹೇರಿಕೆ, ಕಾರ್ಮಿಕ ಕಾಯ್ದೆಗಳ ಸಡಿಲಿಕೆ ಮತ್ತು ತಿದ್ದುಪಡಿಗಳು, ಹೆಚ್ಳಳಗೊಳಿಸಿದ ಸಾರ್ವಜನಿಕ ಕ್ಷೇತ್ರದ ಉದ್ಯೋಗಾವಕಾಶಗಳ ಕಡಿತಗಳು, ಹೆಚ್ಚಳಗೊಳಿಸಿದ ಸಾರ್ವಜನಿಕ ಕ್ಷೇತ್ರಗಳ ಕಾರ್ಪೊರೇಟೀಕರಣಗಳು ಹೀಗೆ ಸಾಗುತ್ತಾ ಈಗ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳು, ಕೊರೋನ ನೆಪದಲ್ಲಿ ಹೇರಿದ ಅವೈಜ್ಞಾನಿಕ ಲಾಕ್‌ಡೌನ್ ಮತ್ತು ಹಬ್ಬಿಸಿದ ಕೊರೋನ ಭಯಾಂದೋಲನಗಳಿಂದಾಗಿ ದೇಶದ ಮಧ್ಯಮ ವರ್ಗದ ಒಂದು ದೊಡ್ಡ ಜನಸಂಖ್ಯೆ ತಮ್ಮ ಜೀವಮಾನದ ಉಳಿತಾಯ ಹಾಗೂ ಆಸ್ತಿಗಳನ್ನು ಕಳೆದುಕೊಂಡು ಕುಸಿತಕ್ಕೊಳಗಾಗಿದೆ. ಇದನ್ನು ಈಗ ಹೊರಬರುತ್ತಿರುವ ಹಲವಾರು ವರದಿಗಳು ಹಾಗೂ ಅಂಕಿ-ಅಂಶಗಳು ದೃಢಪಡಿಸುತ್ತಿವೆ.

ಜೊತೆಗೆ ಸಾಪೇಕ್ಷವಾಗಿ ಮೊದಲಿದ್ದ ಪ್ರಜಾತಾಂತ್ರಿಕ ಅವಕಾಶಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟಿತವಾಗುವ ಅವಕಾಶ ಮೊದಲಾದವುಗಳು ಮಧ್ಯಮ ವರ್ಗ, ಅದರಲ್ಲೂ ಸಾಹಿತಿ, ವಕೀಲ, ಬರಹಗಾರ, ಪತ್ರಕರ್ತ, ಬುದ್ಧಿಜೀವಿ ಸಮೂಹಗಳಿಗೆ ಇಂದು ದುರ್ಲಭವಾಗತೊಡಗಿವೆ. ಅವರ ಮೇಲೆ ದಮನ ಮತ್ತು ನಿರ್ಬಂಧಗಳು ಹೆಚ್ಚಾಗತೊಡಗಿವೆ. ಈ ಎಲ್ಲಾ ಸೇರಿ ಈ ವಲಯಗಳಲ್ಲಿ ತೀವ್ರವಾದ ಅಶಾಂತಿ ಅಸಮಾಧಾನಗಳಿಗೆ ಕಾರಣವಾಗಿದೆ. ಆದರೆ ಬಹುತೇಕವಾಗಿ ಈ ವಲಯದಲ್ಲಿರುವವರು ಒಂದಲ್ಲಾ ಒಂದು ರೀತಿಗಳಲ್ಲಿ ಸಾಮೂಹಿಕವಾಗಿ ಮತ್ತು ವಿಚಾರ ಕೇಂದ್ರಿತವಾಗಿ ಚಿಂತಿಸುವುದರ ಬದಲಿಗೆ ವ್ಯಕ್ತಿ, ಜಾತಿ, ಕೋಮು ಕೇಂದ್ರಿತ ಚಿಂತನೆಯ ಹಾಗೂ ಕಾರ್ಯಾಚರಿಸುವ ಗುಣಗಳನ್ನು ಬೆಳೆಸಿಕೊಂಡಿರುವುದು, ಒಣ ಹಮ್ಮು ಹಾಗೂ ಒಣಪ್ರತಿಷ್ಠೆಗಳ ದಾಸ ರಾಗಿರುವುದು, ಸಮಾಜದ ತಳಪಾಯದ ಸಮುದಾಯಗಳೊಂದಿಗೆ ಮುಕ್ತವಾಗಿ ಸೇರಿಕೊಳ್ಳದ ಪರಿಣಾಮವಾಗಿ ಅಗತ್ಯ ಪ್ರಮಾಣದ ಸಂಘಟಿತ ಪ್ರತಿರೋಧ ಈ ವಲಯದಲ್ಲಿ ಹುಟ್ಟುತ್ತಿಲ್ಲ. ಬಹಳ ಬಲಹೀನವಾಗುತ್ತಾ ಸಾಗುತ್ತಿದೆ.

 ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News