ಮುಂಬೈನಲ್ಲಿ ಕೋವಿಡ್ ಮೂರನೆಯ ಅಲೆ: ಮೇಯರ್ ಎಚ್ಚರಿಕೆ

Update: 2021-09-07 17:44 GMT

ಮುಂಬೈ,ಸೆ.7: ಕೋವಿಡ್ ಮೂರನೇ ಅಲೆಯು ಈಗಾಗಲೇ ಮುಂಬೈಯನ್ನು ಅಪ್ಪಳಿಸಿದೆ ಎಂದು ಮಹಾನಗರದ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಮಂಗಳವಾರ ಇಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂಬರುವ ಹಬ್ಬಗಳ ಋತುವಿನ ಕುರಿತು ಮಾತನಾಡುತ್ತಿದ್ದ ಅವರು ತಮ್ಮ ಮನೆಗಳಲ್ಲಿಯೇ ಇರುವಂತೆ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಜನರನ್ನು ಆಗ್ರಹಿಸಿದರು. ಮುಂಬೈ ನಗರದಲ್ಲಿ ಇಡೀ ಆಗಸ್ಟ್ ತಿಂಗಳಲ್ಲಿ ವರದಿಯಾಗಿದ್ದ ಒಟ್ಟು ಕೋವಿಡ್ ಪ್ರಕರಣಗಳ ಶೇ.28ರಷ್ಟು ಈ ತಿಂಗಳ ಮೊದಲ ಆರು ದಿನಗಳಲ್ಲಿಯೇ ವರದಿಯಾಗಿವೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೂ ಕೋವಿಡ್ ಮೂರನೇ ಅಲೆಯು ಹೊಸ್ತಿಲವರೆಗೆ ಬಂದಿದೆ ಎಂದು ಸೋಮವಾರ ಎಚ್ಚರಿಕೆ ನೀಡಿದ್ದರು. ಪ್ರಜೆಗಳ ಆರೋಗ್ಯ ಮುಖ್ಯವಾಗಿದೆ,ಉತ್ಸವಗಳನ್ನು ನಂತರ ಆಚರಿಸಬಹುದು. ಮುಂಬರುವ ಹಬ್ಬಗಳ ಋತುವಿನ ಮಧ್ಯೆಯೇ ಮೂರನೇ ಅಲೆಯ ಭೀತಿ ಎದುರಾಗಿದೆ ಎಂದು ಅವರು ಹೇಳಿದ್ದರು.
ಸೋಮವಾರ ಮುಂಬೈ ಮಹಾನಗರದಲ್ಲಿ 379 ಹೊಸ ಕೋವಿಡ್ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News