ತಮಗೆ ಬರಬೇಕಿರುವ ಬಾಕಿಗಾಗಿ ಐದು ವರ್ಷಗಳಿಂದಲೂ ಕಾದು ಹೈರಾಣಾಗಿರುವ ಮಿಲ್ ಕಾರ್ಮಿಕರನ್ನು ಒಕ್ಕಲೆಬ್ಬಿಸಲು ನೋಟಿಸ್‌ !

Update: 2021-09-07 18:03 GMT
ಸಾಂದರ್ಭಿಕ ಚಿತ್ರ

ಗುವಾಹಟಿ,ಸೆ.7: ತಮಗೆ ಬಾಕಿಯಿರುವ ಹಣಕ್ಕಾಗಿ ವರ್ಷಗಳಿಂದಲೂ ಹೋರಾಟ ನಡೆಸುತ್ತ ಹಣ್ಣಾಗಿರುವ ಅಸ್ಸಾಮಿನ ಎರಡು ಸರಕಾರಿ ಕಾಗದ ಕಾರ್ಖಾನೆಗಳ ಕಾರ್ಮಿಕರಿಗೆ ಈಗ ತಾವು ವಾಸವಿರುವ ಮನೆಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ.

ಹಿಂದುಸ್ಥಾನ ಪೇಪರ್ ಮಿಲ್ ಕಾರ್ಪೊರೇಷನ್ ಲಿ.(ಎಚ್ಪಿಸಿಎಲ್)ಗೆ ಸೇರಿದ ನಾಗಾಂವ್ ಪೇಪರ್ ಮಿಲ್ ಮತ್ತು ಕಾಚಾರ್ ಪೇಪರ್ ಮಿಲ್ ನ ಮಾಜಿ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಈ ನೋಟಿಸನ್ನು ಸೆ.3ರಂದು ಎಚ್ಪಿಸಿಎಲ್ ನ ಲಿಕ್ವಿಡೇಟರ್ (ಸಮಾಪನಾ ಅಧಿಕಾರಿ) ಜಾರಿಗೊಳಿಸಿದ್ದಾರೆ.

ಇವೆರಡೂ ಕಾರ್ಖಾನೆಗಳು ಸಾಲದ ಕೂಪದಲ್ಲಿ ಸಿಲುಕಿದ್ದು, ದುಡಿಯುವ ಬಂಡವಾಳದ ಕೊರತೆಯಿಂದ ನಾಗಾಂವ್ ಕಾರ್ಖಾನೆಯನ್ನು 2017,ಮಾ.13ರಂದು ಮತ್ತು ಕಾಚಾರ್ ಕಾರ್ಖಾನೆಯನ್ನು 2015,ಅ.20ರಂದು ಮುಚ್ಚಲಾಗಿತ್ತು. ಇವೆರಡೂ ಕಾರ್ಖಾನೆಗಳನ್ನು ಮುಚ್ಚುವ ಮುನ್ನ ಕಾರ್ಮಿಕರಿಗೆ ಯಾವುದೇ ನೋಟಿಸ್ ಅನ್ನು ನೀಡಿರಲಿಲ್ಲ.

ಎರಡೂ ಕಾರ್ಖಾನೆಗಳ 1,200ಕ್ಕೂ ಅಧಿಕ ಮಾಜಿ ಉದ್ಯೋಗಿಗಳು ಪಿಂಚಣಿ,ವೇತನ ಮತ್ತು ಭವಿಷ್ಯನಿಧಿ ಸೇರಿದಂತೆ ತಮಗೆ ಬರಬೇಕಾಗಿರುವ ಹಣಕ್ಕಾಗಿ ಈಗಲೂ ಕಾಯುತ್ತಿದ್ದಾರೆ. 1,000ಕ್ಕೂ ಅಧಿಕ ಕಾರ್ಮಿಕರು ಈಗಾಗಲೇ ಕಾರ್ಖಾನೆ ಆವರಣದಲ್ಲಿಯ ವಸತಿಗೃಹಗಳಲ್ಲಿ ವಾಸವಾಗಿದ್ದು,ಹೆಚ್ಚಿನವರು ನಾಗಾಂವ್ ಕಾರ್ಖಾನೆಗೆ ಸೇರಿದವರಾಗಿದ್ದಾರೆ.
 
ತಮಗೆ ಬರಬೇಕಿರುವ ಬಾಕಿ ಹಣಕ್ಕಾಗಿ ಕಾಯುತ್ತಲೇ 93 ಮಾಜಿ ಉದ್ಯೋಗಿಗಳು ಕೊನೆಯುಸಿರೆಳೆದಿದ್ದು,ಈ ಪೈಕಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ ಹೆಚ್ಚಿನವರ ಸಾವುಗಳು ಅವರ ಚಿಕಿತ್ಸೆಗೆ ಹಣದ ಕೊರತೆಯಿಂದ ಸಂಭವಿಸಿವೆ ಎಂದು ಮಾಜಿ ಸಹಕಾರ್ಮಿಕರು ಆರೋಪಿಸಿದ್ದಾರೆ.
 
ತೀವ್ರ ರಕ್ತದೊತ್ತಡದಿಂದ ಬಳಲುತ್ತಿದ್ದ ಮಾಜಿ ಕಾರ್ಮಿಕ ಅಕ್ಷಯ್ ಕುಮಾರ್ (62) ಮುಝುಮ್ದಾರ್ ಆ.29ರಂದು ಮೃತಪಟ್ಟಿದ್ದಾರೆ. ಹಣವಿಲ್ಲದೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ ಎಂದು ಕಾರ್ಮಿಕರ ಯೂನಿಯನ್ ಹೇಳಿದೆ.

‘2-5-2019ರಿಂದ ಅಥವಾ ಅದಕ್ಕೂ ಮುಂಚಿನಿಂದಲೇ ನಿಮ್ಮ ಉದ್ಯೋಗಗಳು ಅಂತ್ಯಗೊಂಡಿರುವುದರಿಂದ ಕಾನೂನಿನಂತೆ ಕಂಪನಿಗಳ ವಸತಿಗೃಹಗಳಲ್ಲಿ ನಿಮ್ಮ ವಾಸವು ಅನಧಿಕೃತವಾಗಿದೆ. ಹೀಗಾಗಿ ಈ ನೋಟಿಸಿನ 15 ದಿನಗಳಲ್ಲಿ ಮನೆಗಳನ್ನು ತೆರವುಗೊಳಿಸಬೇಕು ’ಎಂದು ಈ ಮಾಜಿ ಕಾರ್ಮಿಕರಿಗೆ ಸಮಾಪನಾ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟಗಳನ್ನು ತೋಡಿಕೊಳ್ಳಲು ಮಾಜಿ ಕಾರ್ಮಿಕರ ನಿಯೋಗವೊಂದು ಸೋಮವಾರ ಗುವಾಹಟಿಗೆ ಪ್ರಯಾಣಿಸಿದೆ.

ಕಾರ್ಮಿಕರ ಯೂನಿಯನ್ ಗಳು ಈಗಾಗಲೇ ಮೋರಿಗಾಂವ್ ಮತ್ತು ಹೈಲಕಂಡಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಗಳನ್ನು ಸಲ್ಲಿಸಿದ್ದು,ಎಚ್ಪಿಸಿಎಲ್ನ ಸಮಾಪನಾ ಅಧಿಕಾರಿ ಕುಲದೀಪ ವರ್ಮಾ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿವೆ.
ತಮಗೆ ನೀಡಲಾಗಿರುವ ನೋಟಿಸ್ ಕಾನೂನು ಬಾಹಿರವಾಗಿದ್ದು,2019,ಮೇ 29ರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಆದೇಶ ಮತ್ತು ಎಪ್ರಿಲ್ 2020ರ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶಗಳನ್ನು ಅತಿಕ್ರಮಿಸಿದೆ ಎಂದು ಕಾರ್ಮಿಕರು ವಾದಿಸಿದ್ದಾರೆ.
 
ಒಂದು ಕಾಲದಲ್ಲಿ ಮಿನಿರತ್ನ ಸಾರ್ವಜನಿಕ ಕ್ಷೇತ್ರದ ಉದ್ಯಮಗಳೆಂದು ವರ್ಗೀಕರಿಸಲ್ಪಟ್ಟಿದ್ದ ಇವೆರಡೂ ಕಾರ್ಖಾನೆಗಳನ್ನು ಜೂನ್ನಲ್ಲಿ ಎರಡನೇ ಬಾರಿಗೆ ಹರಾಜಿಗೂ ಇಡಲಾಗಿತ್ತು. ಆರಂಭಿಕ ಮೀಸಲು ಬೆಲೆಯನ್ನು 1,139 ಕೋ.ರೂ.ಗಳಿಗೆ ನಿಗದಿಗೊಳಿಸಲಾಗಿತ್ತಾದರೂ ನಂತರ ಅದನ್ನು 960 ಕೋ.ರೂ.ಗಳಿಗೆ ತಗ್ಗಿಸಲಾಗಿತ್ತು. ಕಾಚಾರ್ ಕಾರ್ಖಾನೆಯು 2005-06 ಮತ್ತು 2006-07ರ ಹಣಕಾಸು ವರ್ಷಗಳಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯದ ಉತ್ಪಾದನೆಯನ್ನು ಸಾಧಿಸಿತ್ತು.

ಎ.14ರಂದು ಅಸ್ಸಾಮಿನಲ್ಲಿ ತನ್ನ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಬಿಜೆಪಿ ನೇತೃತ್ವದ ಸರಕಾರವು ಕಾಗದ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವುದು ಮಾತ್ರವಲ್ಲ,ಕಾಗದ ಉತ್ಪಾದನೆಯನ್ನೂ ಹೆಚ್ಚಿಸಲಿದೆ. ಅಸ್ಸಾಮಿನಲ್ಲಿ ಬಿದಿರು ಉತ್ಪಾದನೆಯನ್ನು ಮತ್ತು ದೇಶಾದ್ಯಂತ ಕಾಗದ ಮಾರಾಟವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದಿನ್ನೂ ಭರವಸೆಯಾಗಿಯೇ ಉಳಿದಿದೆ.

ಭಾರತ ಸರಕಾರದ ಕಾರ್ಖಾನೆಗಳು ಈಗ ಸಾವಿನ ಕಣಿವೆಯಾಗಿ ಪರಿವರ್ತನೆಗೊಂಡಿವೆ. ನೈಸರ್ಗಿಕ ನ್ಯಾಯದ ಅನುಪಸ್ಥಿತಿಯಲ್ಲಿ ಜನತಾ ನ್ಯಾಯಾಲಯ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮುದಾಯಗಳ ಗಮನವನ್ನು ಸೆಳೆಯುವುದು ಏಕೈಕ ಪರ್ಯಾಯವಾಗಿದೆ ಎಂದು ಕಾರ್ಮಿಕ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಮಾನವೇಂದ್ರ ಚಕ್ರವರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News