ಯೋಜನೆ ಕೈಬಿಡುವುದು ಸರಿಯೇ?

Update: 2021-09-08 18:10 GMT

ಮಾನ್ಯರೇ,
ಗುಬ್ಬಿ ತಾಲೂಕಿನ ಜ್ವಲಂತ ಸಮಸ್ಯೆಯಾದ ಮಠದಹಳ್ಳ ಕೆರೆಗೆ ಹೇಮಾವತಿ ನೀರು ಹರಿಸುವ ಸಂಬಂಧ ಕೆರೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಬೇರೆಡೆಗೆ ತಿರುಗಿಸಿ ನಾಲಾ ಅಧಿಕಾರಿಗಳು ಮಠದಹಳ್ಳಕ್ಕೆ ಎತ್ತಿನ ಹೊಳೆಯ ನೀರಿನ ಆಸೆ ತೋರಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.
ಮಠದಹಳ್ಳ, ಶೇಷನಹಳ್ಳಿ ಹಾಗೂ ಕುರುಬರಹಳ್ಳಿ ಕೆರೆಗೆ ಹೇಮಾವತಿ ಹರಿಸುವ ಯೋಜನೆಗೆ ಕಳೆದ ಒಂದೂವರೆ ದಶಕದಿಂದ ಹೋರಾಟ ನಡೆಯುತ್ತಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆದರೆ ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕಾಗಿ ಈ ಯೋಜನೆಗಿಟ್ಟಿದ್ದ ಹಣವನ್ನು ಸರಕಾರ ವಾಪಸ್ ಪಡೆದ ಪರಿಣಾಮ ಈ ಯೋಜನೆ ಮತ್ತೆ ನನೆಗುದಿಗೆ ಬಿದ್ದಿದೆ.
ಈ ಪರಿಸ್ಥಿತಿಯ ನಡುವೆಯೇ ಉದ್ದೇಶಿತ ಈ ಮೂರು ಕೆರೆಗಳಿಗೆ ಸಮೀಪದ ಎತ್ತಿನಹೊಳೆಯ ನಾಲೆಯಿಂದ ನೀರು ಹರಿಸಿ ಈ ಕೆರೆಗಳಿಗೆ ಹಂಚಿಕೆಯಾದ ಹೇಮಾವತಿಯ 64.48 ಎಂಸಿಎಫ್ ಟಿ ನೀರನ್ನು ಬೆರೆಡೆಗೆ ತಿರುಗಿಸಿ ಮಠದಹಳ್ಳಕ್ಕಿರುವ ಹೇಮಾವತಿ ಯೋಜನೆಯನ್ನು ಕೈಬಿಡಬೇಕೆಂದು ಹೇಮಾವತಿಯ ತುಮಕೂರು ನಾಲಾ ವಲಯದ ಮುಖ್ಯ ಇಂಜಿನಿಯರ್ ತಮ್ಮ ಮೇಲಧಿಕಾರಿಗಳಿಗೆ ವರದಿ ಮಾಡಿರುವುದು ಆತಂಕಕಾರಿಯಾಗಿದೆ. ಸರಕಾರದ ಅನುಮೋದನೆಯಂತೆ ಈ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂಬ ಈ ಭಾಗದ ಜನರ ನಿರಂತರ ಹೋರಾಟದ ನಡುವೆಯೇ ಈ ಯೋಜನೆಯನ್ನು ಕೈಬಿಡಬೇಕೆಂಬ ಅಧಿಕಾರಿಗಳ ಪ್ರಸ್ತಾವನೆ ಖಂಡನೀಯ.
-ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News