ವಿಧಾನಮಂಡಲ ಅಧಿವೇಶನ ವೈಯಕ್ತಿಕವಾಗಿರದೆ, ಜನಪರವಾಗಿರಲಿ

Update: 2021-09-12 17:35 GMT

ಮಾನ್ಯರೇ,

ಸೆಪ್ಟಂಬರ್ 13ರಂದು ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯ ಬಗ್ಗೆ ಸೂಕ್ತ ಚರ್ಚೆ ನಡೆಯಬೇಕು. ಅನಗತ್ಯ ಚರ್ಚೆ, ಕಾಲು ಎಳೆಯುವುದು, ರೇಗಿಸುವಂತಹ ಮಾತುಗಳು ಬಾರದಿರಲಿ. ಅಧಿವೇಶನವೆಂದರೆ ಕಾಲೆಳೆಯುವುದು ಸಹಜವಾದರೂ, ನಾಡಿನ ಜನರು ಬೆಲೆ ಏರಿಕೆ ಹಾಗೂ ಕೋವಿಡ್ ಹೊಡೆತದಿಂದ ನಲುಗುತ್ತಿದ್ದಾರೆ. ಸೌಲಭ್ಯಗಳು ತಲುಪಬೇಕಾದವರಿಗೆ ತಲುಪುತ್ತಿಲ್ಲ. ಪೂರೈಸುತ್ತಿರುವ ಕಿಟ್‌ಗಳು ಸಹ ಪಕ್ಷದ ಕಾರ್ಯಕರ್ತರ ಮನೆಗೆ ತಲುಪುತ್ತಿದೆ. ಸೆಲ್ಫಿ, ವೀಡಿಯೊಗಳಿಗೆ ಸೀಮಿತವಾಗಿದೆ. ಇದರ ಮಧ್ಯೆ ಬೆಲೆ ಏರಿಕೆ, ಸಾಲಗಾರರ ಹಾವಳಿ. ಇಂದು ಜನರಿಗೆ ಉಳಿತಾಯದ ಮಾತಿರಲಿ, ದೈನಂದಿನ ಸ್ಥಿತಿಯನ್ನೂ ಎದುರಿಸಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ 104 ರೂ. ಹಾಗೂ ಗ್ಯಾಸ್ ಬೆಲೆ 1,000 ರೂ.ಯ ಗಡಿ ದಾಟಿದ ಹಂತದಲ್ಲಿದೆ. ಇನ್ನು ವಿರೋಧ ಪಕ್ಷದವರ ಮಾತು, ನಡವಳಿಕೆ ಪ್ರಜೆಯ ಮನಮುಟ್ಟುವಂತಿರಬೇಕು. ಸರಕಾರದ ಸೌಲಭ್ಯ ಪಡೆದುಕೊಂಡು, ಪ್ರಭುತ್ವದ ವಿರುದ್ಧ ಚರ್ಚಿಸದೇ ಮೌನವಹಿಸಿರುವುದು ನಮ್ಮ ರಾಜ್ಯದ ದುರಂತ. ಜನರ ಪರವಾಗಿ ಪಾರದರ್ಶಕ ಆಡಳಿತ ನೀಡುವುದು ಪ್ರಭುತ್ವದ ಕರ್ತವ್ಯ. ಹೈಕಮಾಂಡ್‌ಗೆ ತಲೆ ಬಾಗುವುದು, ಮಠಾಧೀಶರ ಕಾಲಿಗೆ ಬೀಳುವುದನ್ನು ಕಡಿಮೆ ಮಾಡಿ, ದನಿ ಇಲ್ಲದವರಿಗೆ ದನಿಯಾಗಲು ಮುಂದಾಗಬೇಕು. ರಾಜ್ಯದ ಅಧಿವೇಶನವು ಜನರನ್ನು ನೆಮ್ಮದಿಯ ಕಡೆಗೆ ಕೊಂಡೊಯ್ಯಲಿ. ನಡೆಯುವ ಚರ್ಚೆಗಳು ಆರೋಗ್ಯ ಪೂರ್ಣವಾಗಿರಲಿ. ಮಂಡಿಸುವ ಯೋಜನೆಗಳು ಕೊನೆಯ ಪ್ರಜೆಗೂ ತಲುಪುವಂತಾಗಲಿ.

Writer - ಶಿವಕುಮಾರ ಎಂ. ಹೊಸಹಳ್ಳಿ

contributor

Editor - ಶಿವಕುಮಾರ ಎಂ. ಹೊಸಹಳ್ಳಿ

contributor

Similar News