ಅಸ್ಸಾಮಿನಲ್ಲಿ ಅಫ್ ಸ್ಪಾ ಅವಧಿ ಇನ್ನೂ ಆರು ತಿಂಗಳು ವಿಸ್ತರಣೆ

Update: 2021-09-12 17:40 GMT

ಗುವಾಹಟಿ ,ಸೆ.12: ಅಸ್ಸಾಂ ಸರಕಾರವು ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್ ಸ್ಪಾ)ಯ ಹೇರಿಕೆಯನ್ನು ಆ.28ರಿಂದ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಿದೆ. ಈ ವಿಸ್ತರಣೆಗೆ ಯಾವುದೇ ಕಾರಣವನ್ನು ಅದು ನೀಡಿಲ್ಲ. 1958ರ ಸಶಸ್ತ್ರ ಪಡೆಗಳ ಕಾಯ್ದೆಯಡಿ ಇಡೀ ರಾಜ್ಯವು ‘ಆತಂಕಿತ ಪ್ರದೇಶ’ವಾಗಿದೆ ಎಂದು ಸರಕಾರವು ಶನಿವಾರ ಹೇಳಿಕೆಯಲ್ಲಿ ಘೋಷಿಸಿದೆ.

 
ಅಸ್ಸಾಮಿನಲ್ಲಿ 1980ರ ದಶಕದಲ್ಲಿ ಜನಾಂಗೀಯ ಬಂಡಾಯಗಳು ಭುಗಿಲೆದ್ದ ಬಳಿಕ ಕೇಂದ್ರ ಸರಕಾರವು 1990ರಲ್ಲಿ ಮೊದಲ ಬಾರಿಗೆ ಅಫ್ ಸ್ಪಾ ಹೇರಿತ್ತು. ಆಂದಿನಿಂದ ರಾಜ್ಯ ಸರಕಾರದ ಪುನರ್ಪರಿಶೀಲನೆಯ ಬಳಿಕ ಅದನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತಿದೆ. ಈ ಹಿಂದೆ ಫೆಬ್ರವರಿಯಲ್ಲಿ ಅವಧಿಯನ್ನು ವಿಸ್ತರಿಸಲಾಗಿತ್ತು.
  
ಅಫ್ ಸ್ಫಾ ಸೇನೆಗೆ ಶೋಧ ಕಾರ್ಯಾಚರಣೆಗಳಿಗೆ ಮತ್ತು ಬಂಧನಗಳಿಗೆ,ಶಾಂತಿ ಮತ್ತು ಸುವ್ಯವ್ಯಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವೆಂದು ಅದಕ್ಕೆ ಕಂಡು ಬಂದರೆ ಗುಂಡು ಹಾರಿಸಲು ಸಂಪೂರ್ಣ ಅಧಿಕಾರವನ್ನು ನೀಡುತ್ತದೆ ಮತ್ತು ಇಂತಹ ಕ್ರಮಗಳ ವಿರುದ್ಧ ಕಾನೂನಿನಿಂದ ರಕ್ಷಣೆಯನ್ನು ಒದಗಿಸುತ್ತದೆ.

ವಸಾಹತುಶಾಹಿ ಆಡಳಿತದ ಪಳೆಯುಳಿಕೆಯಾಗಿರುವ ಈ ಕಾಯ್ದೆಯನ್ನು ಸಂಘರ್ಷಪೀಡಿತ ಪ್ರದೇಶಗಳಲ್ಲಿ ತುರ್ತು ಕ್ರಮಗಳಿಗಾಗಿ ರೂಪಿಸಲಾಗಿತ್ತು. ಈ ಕಾಯ್ದೆಯನ್ನು ಹೇರಲು ಇಡೀ ರಾಜ್ಯ ಅಥವಾ ರಾಜ್ಯದ ಯಾವುದೇ ಭಾಗ ‘ಆತಂಕಿತ ಪ್ರದೇಶ’ ವೆಂದು ಘೋಷಣೆಯಾಗಿರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News