ಚುನಾವಣೋತ್ತರ ಹಿಂಸಾಚಾರ: ಪಶ್ಚಿಮಬಂಗಾಳದ ಮನವಿಯ ವಿಚಾರಣೆ‌ ಸೆ. 20ಕ್ಕೆ ಮುಂದೂಡಿಕೆ

Update: 2021-09-13 18:21 GMT

ಹೊಸದಿಲ್ಲಿ, ಸೆ. 13: ಚುನಾವಣೋತ್ತರ ಹಿಂಸಾಚಾರದ ಸಂದರ್ಭ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತಂತೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸುವಂತೆ ನಿರ್ದೇಶಿಸಿ ಕೋಲ್ಕತ್ತಾ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಪಶ್ಚಿಮಬಂಗಾಳ ಸರಕಾರ ಸಲ್ಲಿಸಿದ ಮನವಿಯನ್ನು ಸೆಪ್ಟಂಬರ್ 20ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ. 

ರಾಜ್ಯ ಸರಕಾರ ಸಲ್ಲಿಸಿದ ನಕಾಶೆಯನ್ನು ಅವಲೋಕಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಹಾಗೂ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್ 20ಕ್ಕೆ ಮುಂದೂಡಿತು. ರಾಜ್ಯ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಘಟನೆಯ ತನಿಖೆಗೆ ರೂಪಿಸಲಾದ ಸಮಿತಿಯ ಸದಸ್ಯರ ಬಗ್ಗೆ ಗಮನ ಸೆಳೆದರು. 

ಅಲ್ಲದೆ, ತನಿಖೆ ನಡೆಸಲು ಈ ವ್ಯಕ್ತಿಗಳನ್ನು ನೇಮಿಸಿರುವುದು ನಿಮಗೆ ಕಲ್ಪಿಸಲು ಸಾಧ್ಯವೇ? ಇದು ಬಿಜೆಪಿ ತನಿಖಾ ಸಮಿತಿಯೆ ಎಂದು ಪ್ರಶ್ನಿಸಿದರು. ಸಮಿತಿಯಲ್ಲಿರುವ ಸದಸ್ಯರು ಬಿಜೆಪಿಯ ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಾನವ ಹಕ್ಕು ಸಮಿತಿಯ ಅಧ್ಯಕ್ಷರು ಇವರನ್ನು ತನಿಖೆಗೆ ಆಯ್ಕೆ ಮಾಡಿರುವುದು ಹೇಗೆ? ಎಂದು ಪ್ರಶ್ನಿಸಿದರು. ಅಲ್ಲದೆ, ಈ ನಡುವೆ ಕೆಲವು ಮಧ್ಯಂತರ ಆದೇಶ ನೀಡುವಂತೆ ಕೋರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News