ಶ್ರೀನಗರ: ಚೀನಾ ಗ್ರೆನೇಡ್ ಪತ್ತೆ

Update: 2021-09-13 18:20 GMT

ಶ್ರೀನಗರ, ಸೆ. 13: ಶ್ರೀನಗರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಿಆರ್ಪಿಎಫ್ ಸೋಮವಾರ ತಪಾಸಣೆ ನಡೆಸಿ 1 ಚೀಲ ಹ್ಯಾಂಡ್ ಗ್ರನೆಡ್ ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ರಸ್ತೆ ವಿಭಜಕದ ಸಮೀಪ ಗೋಣಿ ಚೀಲದಲ್ಲಿ 6 ಚೀನಾ ಹ್ಯಾಂಡ್ ಗ್ರೆನೇಡ್ ಪತ್ತೆಯಾಯಿತು. 

ಸಿಆರ್ಪಿಎಫ್ ಕೂಡಲೇ ಕಾರ್ಯಪ್ರವೃತವಾದುದರಿಂದ ಸಂಭವಿಸಬಹುದಾಗಿದ್ದ ದುರಂತ ತಪ್ಪಿತು ಎಂದು ಸಿಆರ್ಪಿಎಫ್ ವಕ್ತಾರ ಅಭಿರಾಮ್ ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಇದ್ದುದರಿಂದ, ಗ್ರೆನೆಡ್ ಗಳನ್ನು ಅಲ್ಲಿಯೇ ನಿಷ್ಕ್ರಿಯಗೊಳಿಸಿಲ್ಲ. ಅದನ್ನು ನಿಷ್ಕ್ರಿಯಗೊಳಿಸಲು ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಅವರು ಪ್ರತಿಪಾದಿಸಿದ್ದಾರೆ. 

ಸಿಆರ್ಪಿಎಫ್ ತನ್ನ ತ್ವರಿತ ಪ್ರತಿಸ್ಪಂದನಾ ತಂಡ (ಕ್ಯೂಆರ್ಟಿ)ವನ್ನು ನಿಯೋಜಿಸಿದ ಬೆಮಿನಾ ಪ್ರದೇಶದಲ್ಲಿ ಈ ಗ್ರೆನೆಡ್ಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿಯಲ್ಲಿ ಉಗ್ರರು ಅವಳಿ ದಾಳಿ ನಡೆಸಿದ ಎರಡು ದಿನಗಳ ಬಳಿಕ ಈ ಗ್ರೆನೇಡ್ಗಳು ಪತ್ತೆಯಾಗಿವೆ. ಇದು ಈಗ ಶ್ರೀನಗರದ ಜನರಲ್ಲಿ ಆತಂಕ ಉಂಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News