ಆಗಸ್ಟ್ ನಲ್ಲಿ ಶೇ.11.39ಕ್ಕೇರಿದ ಸಗಟು ಹಣದುಬ್ಬರ

Update: 2021-09-14 15:05 GMT

ಹೊಸದಿಲ್ಲಿ, ಸೆ.14: ಕಳೆದ ಜುಲೈನಲ್ಲಿ ಶೇ.11.16ರಷ್ಟಿದ್ದ ಭಾರತದ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಆಗಸ್ಟ್ ತಿಂಗಳಿಗೆ ಶೇ.11.39ಕ್ಕೇರಿದೆ ಎಂದು ಕೇಂದ್ರವು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಇದರೊಂದಿಗೆ ಸತತ ಐದು ತಿಂಗಳುಗಳಲ್ಲಿ ಸಗಟು ಹಣದುಬ್ಬರವು ಎರಡಂಕಿಗಳಲ್ಲಿಯೇ ಉಳಿದುಕೊಂಡಿದೆ.

ಎರಡು ತಿಂಗಳುಗಳಿಂದ ಇಳಿಕೆಯಲ್ಲಿದ್ದ ಸಗಟು ಹಣದುಬ್ಬರ ಆಗಸ್ಟ್ನ ಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಆಗಸ್ಟ್ನಲ್ಲಿ ಸಗಟು ಹಣದುಬ್ಬರ ಏರಿಕೆಗೆ ಮುಖ್ಯವಾಗಿ ಆಹಾರೇತರ ಸರಕುಗಳು,ಖನಿಜ ತೈಲಗಳು,ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಮೂಲಭೂತ ಲೋಹಗಳು, ಆಹಾರ ಉತ್ಪನ್ನಗಳು,ರಾಸಾಯನಿಕ ಉತ್ಪನ್ನಗಳು ಮತ್ತು ಜವಳಿ ರಾಸಾಯನಿಕಗಳಂತಹ ಉತ್ಪನ್ನಗಳ ಬೆಲೆಗಳಲ್ಲಿ ಹೆಚ್ಚಳವು ಕಾರಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಸರಕಾರದ ಅಂಕಿಅಂಶಗಳಂತೆ ಆಗಸ್ಟ್ನಲ್ಲಿ ಹೆಚ್ಚಿನ ಆಹಾರ ಸಾಮಗ್ರಿಗಳ ಬೆಲೆಗಳಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದ್ದರೂ ದ್ವಿದಳ ಧಾನ್ಯಗಳು,ಈರುಳ್ಳಿ ಮತ್ತು ಹಾಲಿನ ಬೆಲೆಗಳಲ್ಲಿ ಅದು ಏರಿಕೆಯಾಗಿದೆ. ಒಟ್ಟಾರೆಯಾಗಿ ಸಗಟು ಆಹಾರ ಹಣದುಬ್ಬರವು ಶೇ.1.29ರಷ್ಟು ಕಡಿಮೆಯಾಗಿದೆ. ಆದರೆ ಸದ್ರಿ ತಿಂಗಳಿನಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಬೆಲೆಗಳಲ್ಲಿ ಹಣದುಬ್ಬರವು ಶೇ.40.03ರಷ್ಟು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ. ತಯಾರಿತ ಉತ್ಪನ್ನಗಳಲ್ಲಿ ಹಣದುಬ್ಬರವು ಶೇ.11.39ರಷ್ಟಿದೆ.

ಈ ನಡುವೆ ಸರಕಾರವು ಸೋಮವಾರ ಬಿಡುಗಡೆಗೊಳಿಸಿದ್ದ ಅಂಕಿಅಂಶಗಳಂತೆ ಜುಲೈನಲ್ಲಿ ಶೇ.5.59ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ.5.30ಕ್ಕೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News