ಸ್ಪುಟ್ನಿಕ್ ಲೈಟ್ ಲಸಿಕೆಯ ಮೂರನೇ ಹಂತದ ಟ್ರಯಲ್ ಗಳಿಗೆ ಡಿಸಿಜಿಐ ಅನುಮತಿ

Update: 2021-09-15 16:46 GMT

ಹೊಸದಿಲ್ಲಿ,ಸೆ.15: ರಷ್ಯಾ ಅಭಿವೃದ್ಧಿಗೊಳಿಸಿರುವ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗಳಿಗೆ ಭಾರತೀಯ ಔಷಧಿ ಮಹಾ ನಿಯಂತ್ರಕ (ಡಿಸಿಜಿಐ)ರ ಕಚೇರಿಯು ಅನುಮತಿ ನೀಡಿದೆ. 


ಈ ಟ್ರಯಲ್ ಗಳು ಪಾಲ್ಗೊಳ್ಳುವ ಭಾರತೀಯರಲ್ಲಿ ಪರಿಣಾಮಕಾರಿತ್ವವನ್ನು ನಿರ್ಧರಿಸಲಿವೆ. ಸ್ಪುಟ್ನಿಕ್ ಲೈಟ್ ಎಪ್ರಿಲ್ನಲ್ಲಿ ಡಿಸಿಜಿಐನ ವಿಷಯ ತಜ್ಞರ ಸಮಿತಿಯು ತುರ್ತು ಬಳಕೆಗೆ ಅನುಮತಿ ನೀಡಿದ್ದ ಸ್ಪುಟ್ನಿಕ್ v  ಲಸಿಕೆಯ ಸಿಂಗಲ್ ಡೋಸ್ ಆವೃತ್ತಿಯಾಗಿದೆ. 

ಸಮಿತಿಯು ಈಗ ಈ ಆವೃತ್ತಿಯ ಟ್ರಯಲ್ ಗಳನ್ನು ನಡೆಸಲು ಔಷಧಿ ತಯಾರಿಕೆ ಕಂಪನಿ ಡಾ.ರೆಡ್ಡೀಸ್ ಲ್ಯಾಬರೇಟರೀಸ್ ಗೆ ಅನುಮತಿ ನೀಡಿದೆ. ಕಂಪನಿಯು ಪ್ರತಿಕಾಯಗಳ ಜೀವಾವಧಿಯ ಮಾಹಿತಿಯೊಂದಿಗೆ ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿಯ ಕುರಿತು ದತ್ತಾಂಶಗಳನ್ನು ಸಲ್ಲಿಸಿದೆ ಎಂದು ಸಮಿತಿಯು ಹೇಳಿದೆ.

ತುರ್ತು ಬಳಕೆಗೆ ಅನುಮತಿ ಲಭಿಸಿದರೆ ಸ್ಪುಟ್ನಿಕ್ ಲೈಟ್ ಭಾರತದಲ್ಲಿ ಬಳಕೆಯಾಗುವ ಮೊದಲ ಸಿಂಗಲ್ ಡೋಸ್ ಲಸಿಕೆಯಾಗಬಹುದು. ಲಸಿಕೆಯು ಕೋವಿಡ್ ವಿರುದ್ಧ ಶೇ.79.4ರಷ್ಟು ಒಟ್ಟಾರೆ ಪರಿಣಾಮಕಾರಿತ್ವವನ್ನು ಹೊಂದಿದೆ ಮತ್ತು ಪ್ರತಿ ಡೋಸ್ ಗೆ ಸುಮಾರು 730 ರೂ.ವೆಚ್ಚ ತಗಲುತ್ತದೆ ಎಂದು ರಶ್ಯ ಮೇ ತಿಂಗಳಿನಲ್ಲಿ ಹೇಳಿತ್ತು.
60 ವರ್ಷಕ್ಕಿಂತ ಮೇಲಿನವರಿಗೆ ಸ್ಪುಟ್ನಿಕ್ ಲೈಟ್ ಲಸಿಕೆಯ ಬಳಕೆಗೆ ರಶ್ಯ ಅನುಮತಿ ನೀಡಿದೆ.

ಸ್ಪುಟ್ನಿಕ್ v ಲಸಿಕೆಯನ್ನು ಗಮಾಲಿಯಾ ನ್ಯಾಷನಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡಮಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಗೊಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News