ತಮಿಳುನಾಡು: ವಿದ್ಯಾರ್ಥಿನಿ ಆತ್ಮಹತ್ಯೆ; ನೀಟ್ ಗೆ ಸಂಬಂಧಿಸಿದ ಮೂರನೇ ಆತ್ಮಹತ್ಯೆ ಪ್ರಕರಣ

Update: 2021-09-15 18:12 GMT

ಹೊಸದಿಲ್ಲಿ,  ಸೆ.16: ನೀಟ್ ಪರೀಕ್ಷೆ ಬರೆದ ತಮಿಳುನಾಡಿನ ವಿದ್ಯಾರ್ಥಿಯೊಬ್ಬಳು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆ ಐದು ದಿನಗಳಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

ವೆಲ್ಲೂರು ಜಿಲ್ಲೆಯ ತಲೈರಾಮಪಟ್ಟು ಗ್ರಾಮದ ನಿವಾಸಿ ಸೌಂದರ್ಯ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಸೆಪ್ಟೆಂಬರ್ 12ರಂದು ನಡೆದ ನೀಟ್ ಪರೀಕ್ಷೆಗೆ ಬರೆದಿದ್ದಳು. ಆದರೆ ಪರೀಕ್ಷೆಯಲ್ಲಿ ತಾನು ಅನುತ್ತೀರ್ಣಳಾಗುವೆನೆಂಬ ಭೀತಿಯು ಆಕೆಯನ್ನು ಕಾಡುತ್ತಿತ್ತು ಎಂದು ವರದಿಗಳು ತಿಳಿಸಿವೆ.
 
ಸೌಂದರ್ಯಾಳ ಪಾಲಕರು ದಿನಗೂಲಿ ಕಾರ್ಮಿಕರಾಗಿದ್ದು, ಬುಧವಾರ ಬೆಳಗ್ಗೆ ಕೆಲಸಕ್ಕೆ ತೆರಳಿದ್ದರು. ತಾಯಿ ಮನೆಗೆ ವಾಪಾಸಾದಾಗ ಸೌಂದರ್ಯ ತನ್ನ ಕೊಠಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂದು ಕಟ್ಟಪ್ಪಾಡಿ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
  
ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಮೊದಲ ಆತ್ಮಹತ್ಯೆ ಪ್ರಕರಣ ಸೆಪ್ಟೆಂಬರ್ 11ರಂದು ವರದಿಯಾಗಿತ್ತು. ವಯಸ್ಸಿನ ಸೇಲಂ ನಗರದ 20 ವರ್ಷದ ವಿದ್ಯಾರ್ಥಿ ಧನುಷ್ ಎಂಬಾತ ನೀಟ್ ಪರೀಕ್ಷೆ ಬರೆಯುವ ಮೊದಲೇ ಸಾವಿಗೆ ಶರಣಾಗಿದ್ದ. ಈ ಹಿಂದೆ ಎರಡು ನೀಟ್ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದ ಆತ ಮೂರನೆ ಸಲ ಪರೀಕ್ಷೆಗೆ ಬರೆಯಲಿದ್ದ. ಸೋಮವಾರ ರಾತ್ರಿ ಅರಿಯಲೂರು ಜಿಲ್ಲೆಯ ಸಾತಂಪಾಡಿ ಗ್ರಾಮದ ವಿದ್ಯಾರ್ಥಿನಿ 17 ವರ್ಷ ವಯಸ್ಸಿನ ಕನಿಮೋಳಿ ಎಂಬಾಕೆ ನೀಟ್ ಪರೀಕ್ಷೆ ಬರೆದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಳು.

ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆ ಜಾರಿಗೆ ಬಂದ ಆನಂತರ ತಮಿಳುನಾಡಿನಲ್ಲಿ ಈವರೆಗೆ ಒಟ್ಟು 15 ಮಂದಿ ಪರೀಕ್ಷಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News