ಹಬ್ಬದ ಕಾಲದಲ್ಲಿ ಕೋವಿಡ್‌ ಬಗ್ಗೆ ಎಚ್ಚರಿಕೆ ವಹಿಸಿ: ಕೇಂದ್ರ ಸಲಹೆ

Update: 2021-09-16 18:15 GMT

ಹೊಸದಿಲ್ಲಿ, ಸೆ. 16: ಹಬ್ಬದ ಕಾಲ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗುರುವಾರ ಕೋವಿಡ್ ಸೋಂಕು ಹೆಚ್ಚಾಗದಂತೆ ಎಚ್ಚರ ವಹಿಸುವಂತೆ, ಕಾಲಕ್ಕೆ ಅಗತ್ಯವಾಗಿರುವ ಲಸಿಕೆ ತೆಗೆದುಕೊಳ್ಳುವಂತೆ, ಕೋವಿಡ್ ನಡವಳಿಕೆ ಅನುಸರಿಸುವಂತೆ ಹಾಗೂ ಜವಾಬ್ದಾರಿಯುತವಾಗಿ ಪ್ರಯಾಣಿಸುವಂತೆ, ಹಬ್ಬ ಆಚರಿಸುವಂತೆ ಸಲಹೆ ನೀಡಿದೆ.

‘‘ಒಟ್ಟಾರೆ ಕೋವಿಡ್ ಪ್ರಕರಣಗಳು ಸ್ಥಿರವಾಗಿದೆ. ಕೇರಳದಲ್ಲಿ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನು ಎರಡು ಮೂರು ತಿಂಗಳು ನಾವು ಎಚ್ಚರಿಕೆಯಿಂದ ಇರಬೇಕಾಗಿದೆ. ಇದು ಹಬ್ಬಗಳ ಅವಧಿ. ಈ ಸಂದರ್ಭ ಶೀತಜ್ವರ ಕೂಡ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು’’ ಎಂದು ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂಬರುವ ಹಬ್ಬಗಳನ್ನು ಉಲ್ಲೇಖಿಸಿದ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ್, ಇದ್ದಕ್ಕಿದ್ದಂತೆ ಜನಸಂಖ್ಯೆ ದಟ್ಟನೆ ಹೆಚ್ಚಾದರೆ ವೈರಸ್ ಹರಡಲು ಅನುಕೂಲವಾಗುತ್ತದೆ. ಆದುದರಿಂದ ಈಗಿನ ಅಗತ್ಯತೆಯಾದ ಲಸಿಕೆ ಪಡೆದುಕೊಳ್ಳಿ. ಕೋವಿಡ್ ಸೂಕ್ತ ನಡವಳಿಕೆ ಅನುಸರಿಸಿ. ಜವಾಬ್ದಾರಿಯುತವಾಗಿ ಪ್ರಯಾಣಿಸಿ, ಹಬ್ಬ ಆಚರಿಸಿ ಎಂದಿದ್ದಾರೆ. ‘‘ಒಟ್ಟಾರೆ ಸ್ಥಿರತೆ ಕಂಡು ಬಂದಿದೆ. ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಮಿಝೊರಾಂನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿದೆ. ಆದರೆ, ತ್ವರಿತ ಲಸಿಕೀಕರಣದಿಂದ ಪರಿಸ್ಥಿತಿ ಸುಧಾರಿಸಲಿಸದೆ’’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ)ವಿ.ಕೆ. ಪೌಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News