ತಿರುವನಂತಪುರದ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ತೀವ್ರ ಹಣಕಾಸು ಮುಗ್ಗಟ್ಟು

Update: 2021-09-17 15:26 GMT

(ಆಡಳಿತ ಸಮಿತಿಯಿಂದ ಸುಪ್ರೀಂ ಕೋರ್ಟ್ ಗೆ ನಿವೇದನೆ) 

ಹೊಸದಿಲ್ಲಿ,ಸೆ.17: ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ತೀವ್ರ ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದೆ ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ದೇವಸ್ಥಾನದ ಆಡಳಿತ ಸಮಿತಿಯು,ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನ ಟ್ರಸ್ಟ್ನ 25 ವರ್ಷಗಳ ಲೆಕ್ಕಪತ್ರಗಳ ಜೊತೆಗೆ ದೇವಸ್ಥಾನದ ಲೆಕ್ಕಪತ್ರಗಳನ್ನೂ ಲೆಕ್ಕ ಪರಿಶೋಧನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿತು.
 
ಟ್ರಸ್ಟ್ ನ ಬಳಿ ದೇವಸ್ಥಾನದ ಎಷ್ಟು ಆಸ್ತಿ ಇದೆ ಎನ್ನುವುದನ್ನು ತಿಳಿಯುವುದು ಅಗತ್ಯವಾಗಿದೆ ಎಂದು ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯು ನ್ಯಾ.ಯು.ಯು.ಲಲಿತ್ ನೇತೃತ್ವದ ಪೀಠಕ್ಕೆ ತಿಳಿಸಿತು.
 
ದೇವಸ್ಥಾನ ಮತ್ತು ಟ್ರಸ್ಟ್ನ 25 ವರ್ಷಗಳ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎಂದು ಆಗ ಸರ್ವೋಚ್ಚ ನ್ಯಾಯಾಲಯದ ಅಮಿಕಸ್ ಕ್ಯೂರಿ ಆಗಿದ್ದ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಂ ಅವರು 2014,ಎ.15ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿದ್ದರು. ಟ್ರಸ್ಟ್ ದೇವಸ್ಥಾನದ ದೈನಂದಿನ ಖರ್ಚಿಗೆ ಹಣ ನೀಡುತ್ತಿತ್ತು ಎಂದು ಸಮಿತಿಯ ಪರ ಹಿರಿಯ ವಕೀಲ ಆರ್.ಬಸಂತ್ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನದ ವ್ಯವಸ್ಥಾಪನೆಯ ಮೇಲಿನ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿ ಹಿಡಿದಿದ್ದ ತನ್ನ ಜುಲೈ 2020ರ ತೀರ್ಪಿನಲ್ಲಿ ಅಮಿಕಸ್ ಕ್ಯೂರಿ ಸೂಚಿಸಿದ್ದಂತೆ ಲೆಕ್ಕ ಪರಿಶೋಧನೆಗೆ ಆದೇಶಿತ್ತು ಎಂದು ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿತು.

ಅಮಿಕಸ್ ಕ್ಯೂರಿ ತನ್ನ ವರದಿಯಲ್ಲಿ 25 ವರ್ಷಗಳ ದೇವಸ್ಥಾನದ ಮತ್ತು ಟ್ರಸ್ಟ್ನ ಲೆಕ್ಕಪತ್ರಗಳನ್ನು ಮಾಜಿ ಸಿಎಜಿ ವಿನೋದ ರಾಯ್ ಅವರಿಂದ ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸುವಂತೆ ಶಿಫಾರಸು ಮಾಡಿದ್ದರು.

ದೇವಸ್ಥಾನ ಮತ್ತು ಟ್ರಸ್ಟ್ ಅನ್ನು ಪ್ರತ್ಯೇಕವಾಗಿ ನೋಡುವಂತಿಲ್ಲ ಮತ್ತು ಅವುಗಳನ್ನು ಒಟ್ಟಾಗಿ ಲೆಕ್ಕ ಪರಿಶೋಧನೆಗೊಳಪಡಿಸುವ ಅಗತ್ಯವಿದೆ ಎಂದು ಬಸಂತ್ ಹೇಳಿದರು.
ತಾನು ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದಿಂದ ಪ್ರತ್ಯೇಕವಾದ ಸ್ವತಂತ್ರ ಸಂಸ್ಥೆ ಎಂದು ಘೋಷಿಸುವಂತೆ ಕೋರಿ ಟ್ರಸ್ಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News