ನ್ಯೂಯಾರ್ಕ್‌ ಟೈಮ್ಸ್ ವರದಿಯು ಪ್ರಚೋದನಕಾರಿ, ಗಮನವನ್ನು ಬಯಸಿದ್ದಾಗಿದೆ: ಕೇಂದ್ರ‌ ಸರಕಾರ ಹೇಳಿಕೆ

Update: 2021-09-17 16:02 GMT

The New York Times

ಹೊಸದಿಲ್ಲಿ,ಸೆ.17: ಭಾರತವು ಕೋವಿಡ್ ಸಾಂಕ್ರಾಮಿಕವನ್ನು ಉತ್ತಮವಾಗಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಸಂಶೋಧನಾ ವರದಿಯು ಕುರಿತು ನ್ಯೂಯಾರ್ಕ್ ಟೈಮ್ಸ್ (ಎನ್ವೈಟಿ) ಇತ್ತೀಚಿಗೆ ಪ್ರಕಟಿಸಿದ ಲೇಖನವು ಪ್ರಚೋದನಕಾರಿಯಾಗಿದೆ ಮತ್ತು ಗಮನವನ್ನು ಪಡೆದುಕೊಳ್ಳುವ ಪ್ರಯತ್ನವಾಗಿದೆ ಎಂದು ಕೇಂದ್ರವು ಬಣ್ಣಿಸಿದೆ. ಕೋವಿಡ್ ಬಿಕ್ಕಟ್ಟು ಸ್ಫುಟವಾಗಿದ್ದರೂ ಅದನ್ನು ಕಡೆಗಣಿಸಿ ಪ್ರಧಾನಿ ನರೇಂದ್ರ ಮೋದಿಯವರ ಆಶಾವಾದಕ್ಕೆ ಸೂಕ್ತವಾಗಿ ಐಸಿಎಂಆರ್ ತನ್ನ ವರದಿಯನ್ನು ಸಿದ್ಧಗೊಳಿಸಿತ್ತು ಎಂದು ಎನ್ವೈಟಿ ಲೇಖನದಲ್ಲಿ ಹೇಳಿತ್ತು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ ಭಾರ್ಗವ ಅವರು,ಭಾರತವು ಕೋವಿಡ್ ಅನ್ನು ಉತ್ತಮವಾಗಿ ಎದುರಿಸುತ್ತಿರುವ ಮತ್ತು ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಇದೊಂದು ಪ್ರಚೋದನಕಾರಿ ಮತ್ತು ಗಮನವನ್ನು ಬಯಸಿರುವ ಲೇಖನವಾಗಿದೆ. ಲೇಖನದಲ್ಲಿ ಪ್ರಸ್ತಾವಿಸಲಾಗಿರುವ ವಿಷಯಗಳಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು. ‘ಪತ್ರಿಕೋದ್ಯಮ ಮತ್ತು ಸಂಪಾದಕೀಯ ಸ್ವಾತಂತ್ರಕ್ಕೆ ನಾವು ಹೆಚ್ಚಿನ ಗೌರವವನ್ನು ನೀಡುತ್ತೇವೆ ಮತ್ತು ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಂಕ್ರಾಮಿಕದ ವಿರುದ್ಧ ಹೊರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿವೆ ಮತ್ತು ನಮ್ಮೆಲ್ಲ ಶಕ್ತಿ ಮತ್ತು ಸಮಯವನ್ನು ಅದಕ್ಕಾಗಿ ಅರ್ಪಿಸಲಾಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ ಹೇಳಿದರು.

‘ಇಂತಹ ತಿರುಚಲ್ಪಟ್ಟ ವರದಿಯನ್ನು ನಾವು ಖಂಡಿಸುತ್ತೇವೆ, ಇಂತಹುದು ಅಪೇಕ್ಷಣೀಯವಲ್ಲ’ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News