ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ

Update: 2021-09-18 11:30 GMT

ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶನಿವಾರ ರಾಜ್ಯಪಾಲ   ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಅಮರಿಂದರ್ ರಾಜೀನಾಮೆ ಸಲ್ಲಿಸಿದ್ದಾರೆ.

"ನನ್ನ ರಾಜೀನಾಮೆ ಬಗ್ಗೆ ಬೆಳಗ್ಗೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮಾಹಿತಿ ನೀಡಿದ್ದೇನೆ. ನನಗೆ ಮಾಹಿತಿ ನೀಡದೆ ಈಗಾಗಲೇ 3 ಸಲ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ನನಗೆ ಅವಮಾನವಾಗಿದೆ. ಅವರು ವಿಶ್ವಾಸ ಹೊಂದಿರುವ ಯಾರನ್ನಾದರೂ ಸಿಎಂ ಆಗಿ ನೇಮಿಸಬಹುದು. ಕಾಂಗ್ರೆಸ್ ಅಧ್ಯಕ್ಷರು ಏನೇ ನಿರ್ಧರಿಸಿದರೂ ಸರಿ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಹಾಗೂ  ನನ್ನ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ಭವಿಷ್ಯದ ರಾಜಕೀಯದ ಬಗ್ಗೆ ನಿರ್ಧರಿಸುತ್ತೇನೆ'' ಎಂದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ಹೇಳಿದ್ದಾರೆ.

ಶನಿವಾರ ಸಂಜೆ 5 ಗಂಟೆಗೆ ಪಂಜಾಬ್ ಕಾಂಗ್ರೆಸ್ ಭವನದಲ್ಲಿ ಶಾಸಕರ ಸಭೆಯನ್ನು ಕರೆಯಲಾಗಿದ್ದು, ಸಭೆಗೆ ಮೊದಲೇ ಅಮರಿಂದರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮೊದಲು ಮುಖ್ಯಮಂತ್ರಿಯನ್ನು ಬದಲಿಸಬೇಕೆಂದು ಪಂಜಾಬ್ ಕಾಂಗ್ರೆಸ್ ನ 80 ಶಾಸಕರ ಪೈಕಿ 50 ಶಾಸಕರು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News